ನವದೆಹಲಿ: ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್‌ನ ಐದನೇ ದಿನದಂದು, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೊಂದಿಗೆ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡಿದ ಶೈಲಿಯನ್ನು ಭಾರತ ತಂಡದ ನಾಯಕ ಶುಭಮನ್ ಗಿಲ್ ಸಮರ್ಥಿಸಿಕೊಂಡಿದ್ದಾರೆ. ಜಡೇಜಾ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 193 ರನ್‌ಗಳ ಗುರಿ ಬೆನ್ನಟ್ಟುವಾಗ ಭಾರತದ ಕೊನೆಯ ಭರವಸೆಯಾಗಿ, ಅಜೇಯ 61 ರನ್ (181 ಎಸೆತಗಳು) ಗಳಿಸಿದ್ದರು.
ಮೂರನೇ ಟೆಸ್ಟ್‌ನ ಐದನೇ ದಿನದ ಊಟದ ವಿರಾಮದ ಸಮಯದಲ್ಲಿ ಭಾರತವು 112 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿನಲ್ಲಿತ್ತು. ಆ ಸಮಯದಲ್ಲಿ, ಜಡೇಜಾ ಕ್ರೀಸ್‌ನಲ್ಲಿದ್ದ ಕೊನೆಯ ಗುರುತಿಸಲ್ಪಟ್ಟ ಬ್ಯಾಟ್ಸ್‌ಮನ್ ಆಗಿದ್ದರು. ಅವರ ನಂತರ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಬ್ಯಾಟಿಂಗ್‌ಗೆ ಬರಬೇಕಿತ್ತು.
ಇಬ್ಬರೂ ಕೆಳ ಕ್ರಮಾಂಕದ ಆಟಗಾರರು ಜಡೇಜಾ (ಅಜೇಯ 61 ರನ್) ಜೊತೆಗೂಡಿ ರನ್ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸಿದರು. ಆದಾಗ್ಯೂ, ಕೆಲವು ಅಭಿಮಾನಿಗಳು ಜಡೇಜಾ ಅವರ ಈ ಬ್ಯಾಟಿಂಗ್ ಶೈಲಿಯನ್ನು ಪ್ರಶ್ನಿಸಿದರು. ಅವರು ಇಂಗ್ಲೆಂಡ್ ಮೇಲೆ ಒತ್ತಡ ಹೇರಲು ಹೆಚ್ಚು ಆಕ್ರಮಣಕಾರಿಯಾಗಿ ಆಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಪಂದ್ಯದ ನಂತರದ ಸಂದರ್ಶನದಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ, ಭಾರತದ ನಾಯಕ ಶುಭಮನ್ ಗಿಲ್, ಜಡೇಜಾ ಅವರ ಲಯಕ್ಕೆ ಅಡ್ಡಿಪಡಿಸಲು ಯಾವುದೇ ಸಂದೇಶವನ್ನು ನೀಡಲು ಬಯಸಲಿಲ್ಲ ಎಂದು ಹೇಳಿದರು. ಜಡೇಜಾ ಅವರ ಪ್ರದರ್ಶನವನ್ನು ಶ್ಲಾಘಿಸಿದರು.
“ಅವರು ಬಹಳ ಅನುಭವಿ. ಅವರಿಗೆ ಯಾವುದೇ ಸಂದೇಶ ನೀಡಲು ನಾನು ಬಯಸಲಿಲ್ಲ. ಅವರು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೊಂದಿಗೆ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಾಧ್ಯವಾದಷ್ಟು ಕಾಲ ಬ್ಯಾಟ್ ಮಾಡಬೇಕೆಂದು ನಾವು ಬಯಸಿದೆವು. ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿರುವವರೆಗೂ ಯಾವಾಗಲೂ ಆಶಾಭಾವವಿರುತ್ತದೆ. ಗುರಿ ದೊಡ್ಡದಾಗಿರಲಿಲ್ಲ. ಒಂದು 50-60 ರನ್‌ಗಳ ಜೊತೆಯಾಟ ನಡೆದಿದ್ದರೆ, ನಾವು ಮತ್ತೆ ಪಂದ್ಯಕ್ಕೆ ಮರಳಬಹುದಿತ್ತು” ಎಂದು ಗಿಲ್ ಪಂದ್ಯದ ನಂತರದ ಸಮಾರಂಭದಲ್ಲಿ ಹೇಳಿದರು.
ಪಂದ್ಯವನ್ನು ಸಾಧ್ಯವಾದಷ್ಟು ಮುಂದುವರಿಸುವ ತಂತ್ರ
ಚಿಕ್ಕ ಚಿಕ್ಕ ಜೊತೆಯಾಟಗಳನ್ನು ಕಟ್ಟಿ, ಪಂದ್ಯವನ್ನು ಸಾಧ್ಯವಾದಷ್ಟು ಮುಂದಕ್ಕೆ ಕೊಂಡೊಯ್ದು ಇಂಗ್ಲೆಂಡ್ ಮೇಲೆ ಒತ್ತಡ ಹೇರಲು ಬಯಸಿದ್ದಾಗಿ ಗಿಲ್ ಹೇಳಿದರು.
“ಸಿರಾಜ್ ಬ್ಯಾಟಿಂಗ್ ಮಾಡುತ್ತಿದ್ದಾಗ ನಾವು ಸಾಕಷ್ಟು ಆಶಾವಾದಿಗಳಾಗಿದ್ದೆವು. ಉದಾಹರಣೆಗೆ, ಇನ್ನೂ 12 ಅಥವಾ 15 ರನ್‌ಗಳು ಬಾಕಿ ಇರುವಾಗ ನಾವು ಎರಡನೇ ಹೊಸ ಚೆಂಡಿಗೆ ತಲುಪಿದರೆ, ಏನಾದರೂ ಆಗಬಹುದು ಎಂದು ನಾವು ಭಾವಿಸಿದ್ದೆವು.
ಒಂದು ಅಥವಾ ಎರಡು ಬೌಂಡರಿಗಳು ಸಿಕ್ಕಿದರೆ, ನೀವು ತಕ್ಷಣವೇ ಪಂದ್ಯದಲ್ಲಿ ಮೇಲುಗೈ ಸಾಧಿಸುತ್ತೀರಿ. ಸಿರಾಜ್‌ಗೆ ಆರ್ಚರ್ ಚೆಂಡು ತಾಗಿದಾಗ, ಜಡ್ದು ಭಾಯ್ (ಜಡೇಜಾ) ಎಲ್ಲಾ ಆರು ಎಸೆತಗಳನ್ನು ಎದುರಿಸಿದರೆ, ಸಿರಾಜ್‌ರನ್ನು ಸಂಪೂರ್ಣವಾಗಿ ರಕ್ಷಿಸಿದರೂ, ನಾವು ಉತ್ತಮ ಅವಕಾಶವನ್ನು ಹೊಂದಬಹುದು ಎಂದು ಕೊಂಡಿದ್ದೇವು” ಎಂದು ಗಿಲ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ನಮ್ಮ ವಿಧಾನವು ಕೆಳ ಕ್ರಮಾಂಕದ ಆಟಗಾರರು ಬೌಂಡರಿ ಮತ್ತು ಸಿಕ್ಸರ್ಗಳನ್ನು ಹೊಡೆಯಬೇಕು ಎಂಬುದಾಗಿರಲಿಲ್ಲ. ಪಂದ್ಯವನ್ನು ಸಾಧ್ಯವಾದಷ್ಟು ಮುಂದಕ್ಕೆ ಕೊಂಡೊಯ್ದು ಒತ್ತಡ ಹೇರುವುದು ನಮ್ಮ ಉದ್ದೇಶವಾಗಿತ್ತು. ನಾವು ಗುರಿಯ ಹತ್ತಿರ ಹೋಗುತ್ತಿದ್ದಂತೆ, ಇಂಗ್ಲೆಂಡ್ ಹೆಚ್ಚು ಆತಂಕಕ್ಕೆ ಒಳಗಾಗುತ್ತಿತ್ತು. ಇದು ಒಂದು ದೊಡ್ಡ ಪ್ರಯತ್ನದ ಬಗ್ಗೆ ಇರಲಿಲ್ಲ – ನಿಧಾನವಾಗಿ ಪರಿಸ್ಥಿತಿಯನ್ನು ಬದಲಾಯಿಸಬಲ್ಲ ಸಣ್ಣ, ದಿಟ್ಟ ಜೊತೆಯಾಟಗಳ ಬಗ್ಗೆ ಇತ್ತು” ಎಂದು ಗಿಲ್ ಹೇಳಿದರು.
ಐದನೇ ದಿನ ಜಡೇಜಾ ಅವರ ಏಕಾಂಗಿ ಹೋರಾಟ
ಪಂದ್ಯದ ಕೊನೆಯ ದಿನ, ಭಾರತವು ಆರು ವಿಕೆಟ್‌ಗಳು ಕೈಯಲ್ಲಿಟ್ಟುಕೊಂಡು ಗೆಲ್ಲಲು ಇನ್ನೂ 135 ರನ್ ಗಳಿಸಬೇಕಾಗಿತ್ತು. ಕೆ ಎಲ್ ರಾಹುಲ್ ಮತ್ತು ರಿಷಭ್ ಪಂತ್ ಕ್ರೀಸ್‌ನಲ್ಲಿದ್ದರು. ಆದರೆ, ಮೊದಲ ಒಂದು ಗಂಟೆಯೊಳಗೆ ಕೆ ಎಲ್ ರಾಹುಲ್, ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ಅವರ ವಿಕೆಟ್‌ಗಳನ್ನು ಪಡೆದು ಇಂಗ್ಲೆಂಡ್ ಭಾರತದ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿತು.
ಊಟದ ವಿರಾಮಕ್ಕೂ ಮುನ್ನ ನಿತೀಶ್ ಕುಮಾರ್ ರೆಡ್ಡಿ 13 ರನ್‌ಗಳಿಗೆ (53 ಎಸೆತ) ಔಟಾದರು, ಇದು ಭಾರತದ ದುಃಖವನ್ನು ಮತ್ತಷ್ಟು ಹೆಚ್ಚಿಸಿತು. ತಂಡ 112 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಜಡೇಜಾ ಅವರಿಗೆ ಜಸ್ಪ್ರೀತ್ ಬುಮ್ರಾ ಬೆಂಬಲ ನೀಡಿದರು. ಇಬ್ಬರೂ 132 ಎಸೆತಗಳಲ್ಲಿ 35 ರನ್ ಸೇರಿಸುವ ಮೂಲಕ ದಿಟ್ಟವಾಗಿ ಬ್ಯಾಟ್ ಮಾಡಿದರು. ಆದರೆ, ಬುಮ್ರಾ ಅವರ ಪ್ರತಿರೋಧವೂ ಬೆನ್ ಸ್ಟೋಕ್ಸ್ ಅವರ ಶಾರ್ಟ್-ಬಾಲ್ ಬಲೆಗೆ ಸಿಲುಕಿ ಕೊನೆಗೊಂಡಿತು.
ಕೊನೆಯಲ್ಲಿ, ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ಸ್ವಲ್ಪ ಸಮಯದವರೆಗೆ ಹೋರಾಟವನ್ನು ಮುಂದುವರೆಸಿದರು, ಭಾರತವನ್ನು ಗೆಲುವಿನ ಹತ್ತಿರಕ್ಕೆ ತಂದರು. ಆದರೆ, 75ನೇ ಓವರ್‌ನಲ್ಲಿ ಆದ ಒಂದು ದುರದೃಷ್ಟಕರ ವಿಕೆಟ್ ಭಾರತದ ಸೋಲಿಗೆ ಕಾರಣವಾಯಿತು. ಅಂತಿಮವಾಗಿ ಇಂಗ್ಲೆಂಡ್ 22 ರನ್‌ಗಳಿಂದ ವಿಜಯ ಸಾಧಿಸಿತು.



















