ಜೈಪುರ: ಭಾರತ ಏಕದಿನ ತಂಡದ ನಾಯಕ ಶುಭಮನ್ ಗಿಲ್ ಇಂದು ದೇಶೀಯ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ ಐದನೇ ಸುತ್ತಿನ ಪಂದ್ಯದಲ್ಲಿ ಪಂಜಾಬ್ ತಂಡವು ಸಿಕ್ಕಿಂ ಸವಾಲನ್ನು ಎದುರಿಸಲಿದ್ದು, ಈ ಪಂದ್ಯದ ಮೂಲಕ ಗಿಲ್ ಸುದೀರ್ಘ ಬಿಡುವಿನ ಬಳಿಕ ಮೈದಾನಕ್ಕಿಳಿಯಲಿದ್ದಾರೆ. ಆದರೆ, ತಮ್ಮ ನೆಚ್ಚಿನ ಆಟಗಾರನ ಬ್ಯಾಟಿಂಗ್ ವೈಭವವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಮಾತ್ರ ಈ ಬಾರಿ ನಿರಾಸೆ ಕಾದಿದೆ.
ಜೈಪುರದ ಜೈಪುರಿಯಾ ವಿದ್ಯಾಲಯ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಬಿಸಿಸಿಐ ನಿರ್ದೇಶನದಂತೆ ಈ ಪಂದ್ಯವು ‘ಬ್ಯಾಕ್ ಟು ಕ್ಲೋಸ್ಡ್ ಡೋರ್ಸ್’ (ಪ್ರೇಕ್ಷಕರಿಲ್ಲದೆ) ಮಾದರಿಯಲ್ಲಿ ನಡೆಯಲಿದೆ. ಕೇವಲ ಕಾಲೇಜು ಸಿಬ್ಬಂದಿ ಮತ್ತು ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಮೈದಾನದ ಒಳಗೆ ಅವಕಾಶ ನೀಡಲಾಗಿದ್ದು, ಖಾಸಗಿ ಬೌನ್ಸರ್ ಸೇರಿದಂತೆ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ. ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಲೈವ್ ಸ್ಟ್ರೀಮಿಂಗ್ ಇಲ್ಲ:
ಇನ್ನು ಕೇವಲ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಷ್ಟೇ ಅಲ್ಲ, ಮನೆಯಲ್ಲೇ ಕುಳಿತು ಪಂದ್ಯ ವೀಕ್ಷಿಸುವವರಿಗೂ ಭಾರಿ ನಿರಾಸೆಯಾಗಿದೆ. ಬಿಸಿಸಿಐ ಈ ಪಂದ್ಯದ ನೇರ ಪ್ರಸಾರಕ್ಕೆ ಯಾವುದೇ ವ್ಯವಸ್ಥೆ ಮಾಡಿಲ್ಲ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡಿದ್ದ ಪಂದ್ಯಗಳಂತೆಯೇ, ಗಿಲ್ ಅವರ ಈ ಪುನರಾಗಮನದ ಪಂದ್ಯವೂ ಟಿವಿ ಅಥವಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಇರುವುದಿಲ್ಲ. ಅಭಿಮಾನಿಗಳು ಕೇವಲ ಬಿಸಿಸಿಐ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಲೈವ್ ಸ್ಕೋರ್ ಅಪ್‌ಡೇಟ್‌ಗಳನ್ನು ಮಾತ್ರ ನೋಡಬಹುದಾಗಿದೆ.
ನ್ಯೂಜಿಲೆಂಡ್ ಸರಣಿಗೆ ಪೂರ್ವ ತಯಾರಿ:
ಮುಂಬರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯು ಜನವರಿ 11 ರಿಂದ ಆರಂಭವಾಗಲಿದೆ. ಈ ಸರಣಿಗೆ ಸಿದ್ಧರಾಗಲು ಶುಬ್ಮನ್ ಗಿಲ್ ಮತ್ತು ವೇಗಿ ಅರ್ಷದೀಪ್ ಸಿಂಗ್ ಪಂಜಾಬ್ ತಂಡವನ್ನು ಸೇರಿಕೊಂಡಿದ್ದಾರೆ. 2018 ರ ಬಳಿಕ ಇದೇ ಮೊದಲ ಬಾರಿಗೆ ಗಿಲ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಇದೇ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರು ಸಿಕ್ಕಿಂ ವಿರುದ್ಧ ಅಬ್ಬರದ 155 ರನ್ ಸಿಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಶುಕ್ರವಾರ ತಡರಾತ್ರಿ ಜೈಪುರಕ್ಕೆ ಆಗಮಿಸಿದ ಗಿಲ್ ಮತ್ತು ಅರ್ಷದೀಪ್, ಹವಾಮಾನ ವೈಪರೀತ್ಯದಿಂದಾಗಿ ವಿಮಾನ ವಿಳಂಬವಾಗಿ ತಂಡದ ತರಬೇತಿ ಅವಧಿಯನ್ನು ತಪ್ಪಿಸಿಕೊಂಡಿದ್ದರು. ಆದಾಗ್ಯೂ, ಇಂದಿನ ಪಂದ್ಯದಲ್ಲಿ ಪಂಜಾಬ್ ತಂಡದ ಗೆಲುವಿಗೆ ಇವರ ಪಾತ್ರ ನಿರ್ಣಾಯಕವೆನಿಸಿದೆ. ಪಂದ್ಯದ ಟಾಸ್ ಈಗಾಗಲೇ ಮುಗಿದಿದ್ದು, ಪಂಜಾಬ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.


















