ಲಖನೌ : ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ (GT) ತಂಡದ ನಾಯಕ ಶುಭಮನ್ ಗಿಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯವರ (Virat Kohli) ಬಹುದೊಡ್ಡ ದಾಖಲೆಯನ್ನು ಅಳಿಸಿಹಾಕಿ, ಹೊಸ ಇತಿಹಾಸ ಬರೆದಿದ್ದಾರೆ.
ಭಾನುವಾರ (ಏಪ್ರಿಲ್ 12) ಲಖನೌನ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಲಖನೌ ಸೂಪರ್ ಜೈಂಟ್ಸ್ (LSG) ವಿರುದ್ಧ ನಡೆದ ಪಂದ್ಯದಲ್ಲಿ ಶುಭಮನ್ ಗಿಲ್ ಈ ಮಹತ್ವದ ಮೈಲುಗಲ್ಲು ತಲುಪಿದರು. ಈ ಪಂದ್ಯದಲ್ಲಿ ಅವರು ಐಪಿಎಲ್ ಇತಿಹಾಸದಲ್ಲಿ 4,000 ರನ್ಗಳನ್ನು ಪೂರೈಸಿದ ‘ಅತಿ ಕಿರಿಯ’ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾದರು.
ಕೊಹ್ಲಿ ದಾಖಲೆ ಬ್ರೇಕ್
ಶುಭಮನ್ ಗಿಲ್ ಅವರು ತಮ್ಮ 26 ವರ್ಷ ಮತ್ತು 216 ದಿನಗಳ ವಯಸ್ಸಿನಲ್ಲಿ 4,000 ಐಪಿಎಲ್ ರನ್ಗಳ ಗಡಿ ದಾಟಿದರು. ಈ ಮೂಲಕ ಅವರು ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಈ ಹಿಂದೆ 2016ರಲ್ಲಿ ವಿರಾಟ್ ಕೊಹ್ಲಿ ತಮ್ಮ 27 ವರ್ಷ ಮತ್ತು 195 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಆ ಮೂಲಕ ಇದುವರೆಗೂ ಐಪಿಎಲ್ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ 4000 ರನ್ ಪೂರೈಸಿದ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ಆ ದಾಖಲೆ ಗಿಲ್ ಪಾಲಾಗಿದೆ.
ಎರಡನೇ ಅತಿ ವೇಗದ ಭಾರತೀಯ
ಕೇವಲ ಕಿರಿಯ ವಯಸ್ಸಿನ ದಾಖಲೆಯಷ್ಟೇ ಅಲ್ಲದೆ, ಕಡಿಮೆ ಇನಿಂಗ್ಸ್ಗಳಲ್ಲಿ ಈ ಮೈಲುಗಲ್ಲು ತಲುಪಿದ ಎರಡನೇ ಭಾರತೀಯ ಎಂಬ ಕೀರ್ತಿಗೂ ಗಿಲ್ ಭಾಜನರಾಗಿದ್ದಾರೆ. ಅವರು ತಮ್ಮ 118ನೇ ಐಪಿಎಲ್ ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದರು. ಈ ಪಟ್ಟಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅಗ್ರಸ್ಥಾನದಲ್ಲಿದ್ದಾರೆ. ರಾಹುಲ್ ಕೇವಲ 105 ಇನಿಂಗ್ಸ್ಗಳಲ್ಲಿ 4000 ರನ್ ಪೂರೈಸಿ, ಭಾರತೀಯರಷ್ಟೇ ಅಲ್ಲದೆ ಒಟ್ಟಾರೆ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಆಟಗಾರರಾಗಿದ್ದಾರೆ.
ವೇಗವಾಗಿ 4000 ರನ್ ಗಳಿಸಿದ ಆಟಗಾರರು:
- ಕೆ.ಎಲ್. ರಾಹುಲ್: 105 ಇನಿಂಗ್ಸ್ಗಳು
- ಕ್ರಿಸ್ ಗೇಲ್: 112 ಇನಿಂಗ್ಸ್ಗಳು
- ಡೇವಿಡ್ ವಾರ್ನರ್: 114 ಇನಿಂಗ್ಸ್ಗಳು
- ಜೋಸ್ ಬಟ್ಲರ್: 116 ಇನಿಂಗ್ಸ್ಗಳು
- ಶುಭಮನ್ ಗಿಲ್: 118 ಇನಿಂಗ್ಸ್ಗಳು
ಗುಜರಾತ್ಗೆ ಭರ್ಜರಿ ಜಯ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡ, ಏಡೆನ್ ಮಾರ್ಕ್ರಾಮ್ (30 ರನ್) ಅವರ ಆಟದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 164 ರನ್ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. ಗುಜರಾತ್ ಪರ ಕೃಷ್ಣ 28 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.
ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಪರ ನಾಯಕ ಶುಭಮನ್ ಗಿಲ್ ಜವಾಬ್ದಾರಿಯುತ ಆಟವಾಡಿದರು. 40 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 56 ರನ್ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಗಿಲ್ ಔಟಾದ ಬಳಿಕ ಇಂಗ್ಲೆಂಡ್ನ ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್ ಕೇವಲ 37 ಎಸೆತಗಳಲ್ಲಿ 60 ರನ್ ಚಚ್ಚಿದರು. ಇವರಿಬ್ಬರ ಆಕರ್ಷಕ ಅರ್ಧಶತಕಗಳ ಬಲದಿಂದ ಗುಜರಾತ್ ತಂಡ 18.4 ಓವರ್ಗಳಲ್ಲೇ 3 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿ, 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡ ಅಂಕಪಟ್ಟಿಯಲ್ಲಿ 4 ಅಂಕಗಳೊಂದಿಗೆ 5ನೇ ಸ್ಥಾನಕ್ಕೇರಿದ್ದರೆ, ಲಖನೌ 6ನೇ ಸ್ಥಾನಕ್ಕೆ ಕುಸಿದಿದೆ.
ಇದನ್ನೂ ಓದಿ : ಪತಿ ತ್ಯಜಿಸಿ ಲವರ್ ಜತೆ ಜೂಟ್.. ಕಾರಲ್ಲೇ ಪ್ರಿಯಕರನಿಂದ ತಾಳಿ ಕಟ್ಟಿಸಿಕೊಂಡ ಲೇಡಿ



















