ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಕೂಡ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಸೋಲು ಕಂಡಿದೆ.
ಈ ಮೂಲಕ ಭಾರತ ಡಿ ತಂಡಕ್ಕೆ ಸತತ ಎರಡನೇ ಸೋಲಾಗಿದೆ. ಟೂರ್ನಿಯ ಮೊದಲ ಸುತ್ತಿನಲ್ಲಿ ರುತುರಾಜ್ ನಾಯಕತ್ವದ ಭಾರತ ಸಿ ತಂಡದ ವಿರುದ್ಧ 6 ವಿಕೆಟ್ ಗಳ ಸೋಲು ಕಂಡಿದ್ದ ಶ್ರೇಯಸ್ ಪಡೆ, ಎರಡನೇ ಸುತ್ತಿನಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಭಾರತ ಎ ತಂಡದ ವಿರುದ್ಧ 186 ರನ್ ಗಳಿಂದ ಸೋಲು ಕಂಡಿದೆ.
ಈ ಪಂದ್ಯದ ನಾಲ್ಕನೇ ದಿನದಾಟದಲ್ಲಿ 488 ರನ್ ಗಳ ಗುರಿ ಬೆನ್ನಟ್ಟಿದ ಭಾರತ ಡಿ ತಂಡ 301 ರನ್ ಗಳಿಗೆ ಸರ್ವಪತನ ಕಂಡಿತು. 488 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಡಿ ಆಟಗಾರರು ಫೆವಲಿಯನ್ ಪರೇಡ್ ನಡೆಸಿದರು. ಏಕಾಂಗಿ ಹೋರಾಟ ನಡೆಸಿದ ರಿಕಿ ಭುಯಿ 113 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ, ಇನ್ನುಳಿದ ಆಟಗಾರರು ಮಾತ್ರ ಹೆಚ್ಚು ಹೊತ್ತು ಕ್ರೀಜ್ ನಲ್ಲಿ ನಿಲ್ಲಲಿಲ್ಲ. ಪರಿಣಾಮ ತಂಡ ಸೋಲುವಂತಾಯಿತು.
ಯಶ್ ದುಬೆ 37 ರನ್ ಗಳಿಸಿದರು. ಅಥರ್ವ ತಾಯ್ಡೆ ಖಾತೆ ತೆರೆಯದೆ ಔಟಾದರು. ಮೊದಲ ಇನ್ನಿಂಗ್ಸ್ನಲ್ಲಿ 92 ರನ್ ಗಳ ಇನ್ನಿಂಗ್ಸ್ ಆಡಿದ್ದ ದೇವದತ್ ಪಡಿಕ್ಕಲ್ ಎರಡನೇ ಇನ್ನಿಂಗ್ಸ್ನಲ್ಲಿ 1 ರನ್ ಗಳಿಗೆ ಫೆವಲಿಯನ್ ಹಾದಿ ಹಿಡಿದರು. ಮೊದಲ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿದ್ದ ನಾಯಕ ಶ್ರೇಯಸ್ ಅಯ್ಯರ್, ಎರಡನೇ ಇನ್ನಿಂಗ್ಸ್ನಲ್ಲಿ 41 ರನ್ ಗಳಿಸಿದರು. ಸಂಜು ಸ್ಯಾಮ್ಸನ್ 40, ಸರನ್ಶ್ ಜೈನ್ 5, ಸೌರಭ್ ಕುಮಾರ್ 22 ಮತ್ತು ಹರ್ಷಿತ್ ರಾಣಾ 24 ರನ್ ಗಳಿಸಿ ಔಟಾದರು. ಅರ್ಷದೀಪ್ ಸಿಂಗ್ 7 ರನ್ ಗಳಿಸಿ ಅಜೇಯರಾಗಿ ಉಳಿದರೆ, ವಿದ್ವತ್ ಕವರಪ್ಪ ಖಾತೆ ತೆರೆಯದೆ ಔಟಾದರು. ಪರಿಣಾಮ ತಂಡ 186 ರನ್ ಗಳಿಂದ ಸೋಲು ಕಂಡಿತು.