ಮುಂಬಯಿ : ಅತ್ಯುತ್ತಮ ಫಾರ್ಮ್‌ನಲ್ಲಿದ್ದರೂ ಶ್ರೇಯಸ್ ಅಯ್ಯರ್ ಅವರನ್ನು ಟೀಮ್ ಇಂಡಿಯಾದ ಆಯ್ಕೆ ಸಮಿತಿಯು ಪದೇ ಪದೇ ಕಡೆಗಣಿಸುತ್ತಿದೆ ಎಂಬ ಆರೋಪಗಳ ನಡುವೆಯೇ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ಅಯ್ಯರ್‌ಗೆ ಧೈರ್ಯ ತುಂಬಿದ್ದಾರೆ. “ಟಿ20 ತಂಡಕ್ಕೆ ಶೀಘ್ರದಲ್ಲೇ ಅವಕಾಶ ಸಿಗಲಿದೆ, ದೃತಿಗೆಡಬೇಡ” ಎಂದು ಅವರು ಸಂದೇಶ ರವಾನಿಸಿದ್ದಾರೆ. ಪ್ರಸ್ತುತ, ಅಯ್ಯರ್ ಅವರನ್ನು ಕೇವಲ ಏಕದಿನ ಮಾದರಿಗೆ ಮಾತ್ರ ಆಯ್ಕೆ ಮಾಡಲಾಗಿದೆ.
ಶ್ರೇಯಸ್ ಅಯ್ಯರ್, 2024ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ನಂತರ, 2025ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ಅವರನ್ನು ಬರೋಬ್ಬರಿ 26.75 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ತಮ್ಮ ನಾಯಕತ್ವದಲ್ಲಿ, ಅಯ್ಯರ್ 11 ವರ್ಷಗಳ ನಂತರ ಪಂಜಾಬ್ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು.
ಬ್ಯಾಟಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ಅವರು, 2025ರ ಐಪಿಎಲ್ ಆವೃತ್ತಿಯಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ್ದರು. ಇಷ್ಟೆಲ್ಲಾ ಉತ್ತಮ ಪ್ರದರ್ಶನದ ಹೊರತಾಗಿಯೂ, ಅವರನ್ನು 2025ರ ಏಷ್ಯಾ ಕಪ್ ತಂಡದಿಂದ ಕೈಬಿಡಲಾಗಿತ್ತು. ಇದೀಗ, ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೂ ಅವರನ್ನು ಪರಿಗಣಿಸಿಲ್ಲ. ಇದು ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
“ದೃತಿಗೆಡಬೇಡ” ಎಂದ ಮೊಹಮ್ಮದ್ ಕೈಫ್”
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮೊಹಮ್ಮದ್ ಕೈಫ್ ಅವರು ಶ್ರೇಯಸ್ ಅಯ್ಯರ್ ಅವರನ್ನು ಭೇಟಿಯಾಗಿ, ಅವರ ಬೆಂಬಲಕ್ಕೆ ನಿಂತಿದ್ದಾರೆ. ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಅಯ್ಯರ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಕೈಫ್, ಅವರ ಸಾಧನೆಗಳನ್ನು ಕೊಂಡಾಡಿದ್ದಾರೆ.
“ಶ್ರೇಯಸ್ ಅಯ್ಯರ್ ಅವರನ್ನು ಭೇಟಿಯಾಗಿದ್ದು ಸಂತಸ ತಂದಿತು. ಎಂತಹ ಅದ್ಭುತ ಆಟಗಾರ. ಟೆಸ್ಟ್ ಚೊಚ್ಚಲ ಪಂದ್ಯದಲ್ಲೇ ಶತಕ, 2023ರ ಏಕದಿನ ವಿಶ್ವಕಪ್ ಹೀರೋ, ಮತ್ತು 3 ಐಪಿಎಲ್ ತಂಡಗಳನ್ನು ಫೈನಲ್‌ಗೆ ಕೊಂಡೊಯ್ದ ಏಕೈಕ ನಾಯಕ. ಟಿ20 ತಂಡಕ್ಕೂ ಶೀಘ್ರದಲ್ಲೇ ಅವಕಾಶ ಸಿಗಲಿದೆ. ದೃತಿಗೆಡಬೇಡ, ನಿನಗೆ ಉಜ್ವಲ ಭವಿಷ್ಯವಿದೆ, ಶ್ರೇಯಸ್” ಎಂದು ಕೈಫ್ ಬರೆದುಕೊಂಡಿದ್ದಾರೆ.
“ಆಸ್ಟ್ರೇಲಿಯಾ ಪ್ರವಾಸಕ್ಕೆ ಉಪನಾಯಕನಾಗಿ ಆಯ್ಕೆ”
ಟಿ20 ತಂಡದಿಂದ ಕಡೆಗಣಿಸಲ್ಪಟ್ಟರೂ, ಶ್ರೇಯಸ್ ಅಯ್ಯರ್‌ಗೆ ಒಂದು ಸಿಹಿ ಸುದ್ದಿ ಕೂಡ ಇದೆ. ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಏಕದಿನ ಸರಣಿಗೆ, ಅವರನ್ನು ಭಾರತ ತಂಡದ ಉಪನಾಯಕನಾಗಿ ನೇಮಿಸಲಾಗಿದೆ. ಶುಭಮನ್ ಗಿಲ್ ಈ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
“ಟೆಸ್ಟ್ ಕ್ರಿಕೆಟ್‌ನಿಂದ ಸ್ವಯಂ-ಹೊರಗಿಳಿದಿದ್ದ ಅಯ್ಯರ್”
ಇತ್ತೀಚೆಗೆ, ಶ್ರೇಯಸ್ ಅಯ್ಯರ್ ಅವರು ತಮ್ಮ ದೇಹವು ಐದು ದಿನಗಳ ಪಂದ್ಯಗಳ ಒತ್ತಡವನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿಲ್ಲ ಎಂದು ಬಿಸಿಸಿಐಗೆ ಪತ್ರ ಬರೆದಿದ್ದರು. ಪುನರಾವರ್ತಿತ ಬೆನ್ನು ನೋವಿನಿಂದ ಬಳಲುತ್ತಿರುವ ಅವರು, ತಮ್ಮ ಫಿಟ್‌ನೆಸ್ ಮೇಲೆ ಗಮನ ಹರಿಸಲು ಟೆಸ್ಟ್ ಕ್ರಿಕೆಟ್‌ನಿಂದ ಸದ್ಯಕ್ಕೆ ಪರಿಗಣಿಸದಂತೆ ಮನವಿ ಮಾಡಿದ್ದರು. ಇದನ್ನು ಬಿಸಿಸಿಐ ಒಪ್ಪಿಕೊಂಡಿತ್ತು. ಈ ಕಾರಣದಿಂದ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಿರಲಿಲ್ಲ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರು ಸಂಪೂರ್ಣ ಫಿಟ್ ಆಗಿದ್ದು, ಅತ್ಯುತ್ತಮ ಫಾರ್ಮ್‌ನಲ್ಲಿದ್ದರೂ ಟಿ20 ತಂಡಕ್ಕೆ ಆಯ್ಕೆ ಮಾಡದಿರುವುದು ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರ ನಿರ್ಧಾರದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.