ಬೆಂಗಳೂರು: ಸರ್ಕಾರಿ ಉದ್ಯೋಗ ಇರುವುದಿಲ್ಲ. ಖಾಸಗಿ ಕಂಪನಿಯಲ್ಲಿ ಕೆಲಸವನ್ನೂ ಮಾಡುವುದಿಲ್ಲ. ಆದರೂ, 60 ವರ್ಷದ ನಂತರ ಪಿಂಚಣಿ ಪಡೆಯಲು ಸಾರ್ವಜನಿಕರಿಗೆ ಹಲವು ಆಯ್ಕೆಗಳಿವೆ. ಅದರಲ್ಲೂ, ಅಸಂಘಟಿತ ವಲಯದ ಕಾರ್ಮಿಕರು, ರೈತರಿಗೆ ಸರ್ಕಾರದ ಯೋಜನೆಗಳೇ ಆಸರೆಯಾಗಿರುತ್ತವೆ. 60 ವರ್ಷದ ಬಳಿಕ ಯಾವೆಲ್ಲ ಸರ್ಕಾರದ ಯೋಜನೆಗಳಿಂದ ಪಿಂಚಣಿ (Retirement Schemes) ದೊರೆಯುತ್ತದೆ? ಯಾವುದು ಅನುಕೂಲ ಎಂಬುದು ಸೇರಿ ಹಲವು ಮಾಹಿತಿ ಇಲ್ಲಿದೆ.
ಅಟಲ್ ಪಿಂಚಣಿ ಯೋಜನೆ
ಅಟಲ್ ಪಿಂಚಣಿ ಯೋಜನೆ (ಅತ್ಯಂತ ಉತ್ತಮ ಆಯ್ಕೆ. ಅದರಲ್ಲೂ ವಿಶೇಷವಾಗಿ ನಿವೃತ್ತಿಯ ನಂತರ ಪಿಂಚಣಿ ಆವಶ್ಯಕತೆ ಇರುವವರಿಗೆ ಹೆಚ್ಚಿನ ಅನುಕೂಲವಿದೆ. 60 ವರ್ಷ ತುಂಬಿದ ವ್ಯಕ್ತಿಗೆ ಪ್ರತಿ ತಿಂಗಳು 1,000 ರಿಂದ 5,000 ರೂ.ವರೆಗೆ ಪಿಂಚಣಿ ಸಿಗುತ್ತದೆ.ಆದರೆ ಈ ಯೋಜನೆಯಲ್ಲಿ ಪ್ರತಿ ತಿಂಗಳು 210 ರೂಪಾಯಿ ಠೇವಣಿ ಇರಿಸಬೇಕಾಗುತ್ತದೆ.
ಶ್ರಮ ಯೋಗಿ ಮಾನ್ ಧನ್ ಯೋಜನೆ
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ ದೇಶದ ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸಗಾರರು ಮತ್ತು ಕಾರ್ಮಿಕರಿಗೆ ಆರ್ಥಿಕ ಸುರಕ್ಷತೆ ಒದಗಿಸಲು ಇರುವಂತಹ ಯೋಜನೆ. ಈ ಯೋಜನೆಯು ದೇಶದ ಅಸಂಗತಿತ ಕ್ಷೇತ್ರದ ಕಾರ್ಮಿಕರಿಗೆ, ವಿಶೇಷವಾಗಿ ಅವಶ್ಯಕತೆಯಲ್ಲಿರುವವರಿಗೆ ನಿವೃತ್ತಿ ನಂತರದ ಪಿಂಚಣಿಯನ್ನು ನೀಡುತ್ತದೆ. ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷದ ನಂತರ ಮಾಸಿಕ 3 ಸಾವಿರ ರೂ. ಪಿಂಚಣಿ ಲಭಿಸುತ್ತದೆ. 18ರಿಂದ 40 ವರ್ಷದೊಳಗಿನವರು ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಕಿಸಾನ್ ಮಾನ್ ಧನ್ ಯೋಜನೆ
ಕಿಸಾನ್ ಮಾನ್ ಧನ್ ಯೋಜನೆಯು ಕರ್ನಾಟಕ ಸೇರಿದಂತೆ ದೇಶಾದ್ಯಂತ ಕೃಷಿಕರಿಗೆ ಆರ್ಥಿಕತೆಯನ್ನು ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದೆ. ಈ ಯೋಜನೆಯು ಕೃಷಿಕರ ನಿವೃತ್ತಿ ನಂತರದ ಆರ್ಥಿಕ ಬೆಂಬಲ ನೀಡಿದ ಸಾಲದ ಭಾರವನ್ನು ಕಡಿಮೆ ಮಾಡಲು ಸಹಾಯಗವಾಗುತ್ತದೆ. ದೇಶದ ಸಣ್ಣ ರೈತರು (2 ಹೆಕ್ಟೇರ್ ಅಥವಾ ಅದಕ್ಕಿಂತ ಕಡಿಮೆ ಜಮೀನು ಇರುವವರು ಅರ್ಹರು), 18-40 ವರ್ಷದೊಳಗಿನವರು ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. 60 ವರ್ಷದ ನಂತರ ಮಾಸಿಕ 3 ಸಾವಿರ ರೂ. ಪಿಂಚಣಿ ದೊರೆಯುತ್ತದೆ.
ಏಕೀಕೃತ ಪಿಂಚಣಿ ಯೋಜನೆ
ಏಕಿಕೃತ ಪಿಂಚಣಿ ಯೋಜನೆಯು ಏಪ್ರಿಲ್ 1ರಿಂದ ಜಾರಿಗೆ ಬರುತ್ತಿದೆ. ದೇಶಾದ್ಯಂತ ಸರ್ಕಾರಿ ಉದ್ಯೋಗಿಗಳಿಗೆ ಪಿಂಚಣಿಯ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ನಿವೃತ್ತಿ ನಂತರವೂ ಆರ್ಥಿಕ ಸುರಕ್ಷತೆ ಒದಗಿಸಲು ಮಹತ್ವದ ಯೋಜನೆ ಆಗಿದೆ. ಈ ಯೋಜನೆಯಡಿಯಲ್ಲಿ, ಒಬ್ಬ ಉದ್ಯೋಗಿ 25 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿವೃತ್ತಿಯ ಮೊದಲು, ಕೆಲಸದ ಕೊನೆಯ 12 ತಿಂಗಳ ಮೂಲ ವೇತನದ ಶೇ.50ರಷ್ಟು ಹಣ ಪಿಂಚಣಿ ರೂಪದಲ್ಲಿ ಅವರಿಗೆ ಸಿಗುತ್ತದೆ.