ಇತ್ತೀಚೆಗೆ ಸಾಮಾಜಿಕ ಜಾಲತಾಣ ಬದುಕಿನೊಂದಿಗೆ ನಂಟು ಬೆಳೆಸಿಕೊಂಡು ಬಿಟ್ಟಿದೆ. ಹೀಗಾಗಿ ಅದರಲ್ಲಿಯೇ ಎಲ್ಲರೂ ಮಿಂದೇಳುತ್ತಿದ್ದಾರೆ. ಅದು ಇಡೀ ವಿಶ್ವವನ್ನೇ ಸಂಘಜೀವಿಯನ್ನಾಗಿ ಮಾಡಿದೆ. ಎಲ್ಲರನ್ನೂ ಒಂದೇ ಕುಟುಂಬದಂತೆ ಬೆಸೆದಿದೆ. ಹಲವು ಬಾರಿ ಇದು ಸಮಾಜವನ್ನ ಇಕ್ಕಟ್ಟಿಗೂ ಸಿಲುಕಿಸಿದೆ. ಸಾಕಷ್ಟು ಅಪಾಯವನ್ನೂ ಸೃಷ್ಟಿಸಿದೆ. ಹೀಗಾಗಿಯೇ ಈಗ ಮೆಸೆಜಿಂಗ್ ಆಪ್ ನ ಗೊಂದಲವೊಂದು ದೇಶದಲ್ಲಿ ಸೃಷ್ಟಿಯಾಗಿದೆ.

ಜಾಲತಾಣದಿಂದ ಸೃಷ್ಟಿಯಾಗುವ ಅಪಾಯಗಳಿಗೆ ಕಡಿವಾಣ ಹಾಕಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು, ಮಾಹಿತಿ ತಂತ್ರಜ್ಞಾನ ನಿಯಮ- 2021ನ್ನು ಜಾರಿಗೆ ತಂದಿತ್ತು. ಇದರ ಪ್ರಕಾರ, ದೇಶದಲ್ಲಿ 50 ಲಕ್ಷಕ್ಕಿಂತ ಹೆಚ್ಚು ಬಳಕೆದಾರರು ಮೆಸೇಜಿಂಗ್ ಆ್ಯಪ್ ಬಳಸುತ್ತಿದ್ದು, ಅವರು ಅಧಿಕಾರಿಗಳು ಕೇಳಿದಾಗ ಮಾಹಿತಿಯ ಮೂಲ ನೀಡಬೇಕು. ಯಾವುದೋ ಸಮಾಜದ್ರೋಹಿ, ದೇಶದ್ರೋಹಿ ಮೆಸೆಜ್ ಗಳು ದೇಶಕ್ಕೆ ಅಪಾಯ ತಂದಾಗ ಅಥವಾ ಇನ್ನಾವೋದೋ ಕಾರಣದಿಂದಾಗಿ ಮೆಸೆಜ್ ನ ಮೂಲವನ್ನು ಕೇಳಿದಾಗ ಮೆಸೇಜಿಂಗ್ ಆ್ಯಪ್ ನಲ್ಲಿ ಆ ಸಂದೇಶವನ್ನು ಮೊದಲು ಸೃಷ್ಟಿದವರ ಮಾಹಿತಿಯನ್ನು ಸರಕಾರ ಬಯಸಿದಾಗ ಸಂಬಂಧಿತ ಸಂಸ್ಥೆಗಳು ನೀಡಬೇಕು. ಇದರಿಂದಾಗಿ ಸುಳ್ಳು ಸುದ್ದಿ, ಪ್ರಚೋದನಾಕಾರಿ ಬರಹಗಳ ಮೂಲ ಗುರುತಿಸಿ ತಪ್ಪಿತಸ್ಥರನ್ನು ಶೀಘ್ರವೇ ಪತ್ತೆ ಹಚ್ಚಲು ಕೂಡ ಸಾಧ್ಯವಾಗುತ್ತಿದೆ. ಆದರೆ, ಈ ನಿಯಮಕ್ಕೆ ಈಗ ಮೆಸೇಜಿಂಗ್ ಆ್ಯಪ್ ಸೆಡ್ಡು ಹೊಡೆದು ನಿಂತಿವೆ.

ಆ್ಯಪ್‌ಗಳು ಹೀಗೆ ಮಾಹಿತಿಯನ್ನು ಕೊಡಲು ಒಪ್ಪಿಕೊಂಡರೆ ಜನರು ಆ ಆ್ಯಪ್ ಗಳ ಬಳಕೆಯನ್ನೇ ನಿಲ್ಲಿಸುವ ಸಾಧ್ಯತೆ ಇರುತ್ತದೆ ಎಂದು ಆಪ್ ಸಂಸ್ಥೆ ಮಾಹಿತಿ ನೀಡಲು ಮುಂದಾಗುತ್ತಿಲ್ಲ. ಹೀಗಾಗಿಯೇ ಬಳಕೆದಾರರ ಖಾಸಗಿತನವನ್ನು ರಕ್ಷಿಸುತ್ತೇವೆ ಎಂದು ಹೇಳುತ್ತಿವೆ. ಈ ಹಿನ್ನೆಲೆಯಲ್ಲಿಯೇ ವಾಟ್ಸಾಪ್ ಮತ್ತು ಅದರ ಮಾತೃಸಂಸ್ಥೆ ಮೆಟಾ ಹೊಸ ನಿಯಮದ ವಿರುದ್ಧ ದೆಹಲಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದೆ.
ಕೇಂದ್ರ ಸರ್ಕಾರದ ನಿಯಮ ಒಪ್ಪಿಕೊಂಡರೆ ವಾಟ್ಸಾಪ್ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ತೆಗೆದುಹಾಕಬೇಕು. ಇದು ತನ್ನ ಬಳಕೆದಾರರ ಗೌಪ್ಯತೆ ಹಾಗೂ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ. ವಿಶ್ವಾಸಾರ್ಹಕ್ಕೆ ಧಕ್ಕೆಯಾದಂತಾಗುತ್ತದೆ. ಭಾರತ ಸಂವಿಧಾನದ 14, 19 ಮತ್ತು 21ನೇ ವಿಧಿಗಳ ಅಡಿಯಲ್ಲೂ ಬಳಕೆದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿದಂತೆ. ಹೀಗಾಗಿ ನಾವು ಮಾಹಿತಿ ನೀಡುವುದಿಲ್ಲ. ಅದು ಸಂವಿಧಾನಿಕ ಎಂದು ಘೋಷಿಸಬೇಕೆಂದು ವಾದ ಮುಂದಿಟ್ಟಿದೆ. ಇಲ್ಲವಾದರೇ ಭಾರತವನ್ನೇ ಬಿಟ್ಟು ಹೋಗುತ್ತೇವೆ ಎಂದು ಕೂಡ ಧಮ್ಕಿ ಹಾಕುತ್ತಿದೆ.

ಹೌದಪ್ಪ…!! ನೀವು ಬಳಕೆದಾರರ ಗೌಪ್ಯತೆ ಕಾಪಾಡಿಕೊಳ್ಳಲು ಹೋಗಿ, ದೇಶಕ್ಕೆ ಕಂಟಕ ತಂದರೆ? ಎಂಬುವುದು ಈಗ ಬಹು ಚರ್ಚಿತ ವಿಷಯ. ಎನ್ ಕ್ರಿಪ್ಶನ್ ತೆಗೆದು ಹಾಕದೆ ಸಂದೇಶದ ಮೂಲ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದಾದರೆ ವಾಟ್ಸಾಪ್ ಅದಕ್ಕೆ ಪರ್ಯಾಯ ಮಾರ್ಗ ಕಂಡು ಹಿಡಿಯಬೇಕು. ವಾಟ್ಸಾಪ್ ಕೂಡ ಬಳಕೆದಾರರ ಬಳಕೆದಾರರ ಮಾಹಿತಿಯಿಂದ ಹಣ ಮಾಡುತ್ತಿದೆ. ಹೀಗಾಗಿ ಅದಕ್ಕೆ ಕಾನೂನು ಬದ್ಧತೆ ಇಲ್ಲ. ಕೋಮು ಗಲಭೆಗಳಂಥ ಸಂದರ್ಭಗಳಲ್ಲಿ ಸಂದೇಶಗಳ ಮೂಲ ಪತ್ತೆಹಚ್ಚುವುದು ಅತ್ಯಗತ್ಯ. ಇದು ದೇಶಕ್ಕೆ ಅವಶ್ಯ. ಇಲ್ಲವಾದರೆ ಶತೃ ರಾಷ್ಟ್ರಗಳು ಕೂಡ ಇದನ್ನೇ ಆಧಾರವಾಗಿಟ್ಟುಕೊಂಡು ದೇಶಕ್ಕೆ ಅಪಾಯ ತಂದೊಡ್ಡಬಹುದು ಎಂಬುವುದು ಭಾರತದ ವಾದ. ಇವುಗಳ ಮೂಲಕ ಈಗಾಗಲೇ ಸುಳ್ಳು ಸುದ್ದಿಗಳು ಹರಡಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗುವಂತಾಗಿವೆ. ಸಾಮಾಜಿಕ ಜಾಲತಾಣಗಳಿಗೆ ಅಂಕುಶವಿಲ್ಲದೇ ಇರುವುದು ಹಾಗೂ ಗುರುತು ಮರೆಮಾಚಿ ಯಾರು ಬೇಕಾದರೂ ಏನೂ ಬೇಕಾದರೂ ಬರೆಯುವಷ್ಟು ಸ್ವಾತಂತ್ರ್ಯ ಸಿಕ್ಕಂತಾಗಿ ಅನಾಹುತಗಳು ಸೃಷ್ಟಿಯಾಗುತ್ತಿವೆ.

ಚಾರಿತ್ರ್ಯವಧೆಯ ಬರಹಗಳು, ದ್ವೇಷ ಹರಡುವಂಥ ತಪ್ಪು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿನ ಜಾಗವನ್ನು ಹೆಚ್ಚು ಆಕ್ರಮಿಸುತ್ತಿವೆ. ಇವು ಕೋಮುಗಲಭೆಗಳಿಗೂ ಕಾರಣವಾಗುತ್ತಿವೆ. ಕರ್ನಾಟದಲ್ಲಿ ನಡೆದ ಡಿಜೆ ಹಳ್ಳಿ ಗಲಭೆಗೂ ಇದೇ ಕಾರಣವಾಗಿದ್ದು. ಹೀಗಾಗಿಯೇ ಪೊಲೀಸ್ ಠಾಣೆಗೆ ಬೆಂಕಿ ಬೀಳುವಂತಾಯಿತು. ತಪ್ಪು ಮಾಹಿತಿ ಯಾವುದೇ ನಿಯಂತ್ರಣವಿಲ್ಲದೆ ಪ್ರಚಾರ ಪಡೆಯುತ್ತಿವೆ. ವೈದ್ಯಕೀಯ ಲೋಕಕ್ಕೆ ತಿಳಿಯದ ಔಷಧಿಗಳು ವಾಟ್ಸಾಪ್ ನಲ್ಲಿ ಸಿಗುತ್ತಿವೆ. ಹೀಗಾಗಿಯೇ ಜವಾಬ್ದಾರಿ ರಹಿತ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯಕಾರಿ ಎಂಬುವುದು ಕೇಂದ್ರದ ವಾದವಾಗಿದೆ.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಟ್ಟಿರುವ ಹೆಜ್ಜೆ ದೇಶದ ಬಾಹ್ಯ ಹಾಗೂ ಆಂತರಿಕ ಭದ್ರತೆಗೆ ಸೂಕ್ತವಾದ ನಿರ್ಧಾರವೇ ಆಗಿದೆ. ವಿಶ್ವದಲ್ಲಿ 200 ಕೋಟಿ ವಾಟ್ಸಾಪ್ ಬಳಕೆದಾರರಿದ್ದು, ಈ ಪೈಕಿ 50 ಕೋಟಿ ಜನ ಬಳಕೆದಾರರು ಭಾರತದಲ್ಲಿಯೇ ಇದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರ ಭದ್ರತೆಯಿಂದ ಸರಿಯಾಗಿಯೇ ಇದ್ದು, ಒಂದು ವೇಳೆ ವಾಟ್ಸಾಪ್ ದೇಶದಿಂದ ಹೊರಗೆ ಹೋದರೆ, ಮತ್ತೊಂದು ಮೇಕ್ ಇನ್ ಇಂಡಿಯಾ ಆಪ್ ಗೆ ವೇದಿಕೆ ಸೃಷ್ಟಿಯಾದಂತಾಗುತ್ತದೆ. ಆಗ ಕಾನೂನು ಬಾಹಿರ ಚಟುವಟಿಕೆಗಳು ನಿಯಂತ್ರಣಕ್ಕೆ ಬರಬಹುದು..ಅಲ್ವಾ…ನಮಗೆ ದೇಶ ಸುರಕ್ಷತೆ ಮುಖ್ಯ!!