ನವದೆಹಲಿ : ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೇ ಸೋಮವಾರ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರತ್ತ ಚಪ್ಪಲಿ ಎಸೆದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ವಕೀಲ ರಾಜೇಶ್ ಕಿಶೋರ್, ತಮ್ಮ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ಸನಾತನ ಧರ್ಮವನ್ನು ಗೇಲಿ ಮಾಡಿದ್ದಕ್ಕೆ ಪ್ರತಿಯಾಗಿ ‘ದೇವರ ಆದೇಶದಂತೆ’ ತಾನು ಹೀಗೆ ಮಾಡಿದ್ದಾಗಿ ಅವರು ವಿಚಿತ್ರ ಸಮರ್ಥನೆ ನೀಡಿದ್ದಾರೆ. “ನಾನಿದನ್ನು ಮಾಡಿದ್ದಲ್ಲ, ದೇವರು ಮಾಡಿಸಿದ್ದು. ದೇಶದ ಮುಖ್ಯ ನ್ಯಾಯಮೂರ್ತಿಗಳು ಸನಾತನ ಧರ್ಮವನ್ನು ಗೇಲಿ ಮಾಡಿದರು. ಇದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಾಗಿದ್ದು, ಸರ್ವಶಕ್ತನ ಆದೇಶವಾಗಿತ್ತು,” ಎಂದು ಕಿಶೋರ್ ಹೇಳಿದ್ದಾರೆ.
ಘಟನೆಗೆ ಕಾರಣವೇನು? ಮಧ್ಯಪ್ರದೇಶದ ಖಜುರಾಹೊದಲ್ಲಿರುವ 7 ಅಡಿ ಎತ್ತರದ ಶಿರಚ್ಛೇದಿತ ವಿಷ್ಣುವಿನ ವಿಗ್ರಹದ ಪುನರ್ನಿರ್ಮಾಣಕ್ಕೆ ನ್ಯಾಯಾಂಗದ ಮಧ್ಯಸ್ಥಿಕೆ ಕೋರಿ ಇತ್ತೀಚೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯೊಂದು ಸಲ್ಲಿಕೆಯಾಗಿತ್ತು. ಆದರೆ, ಸಿಜೆಐ ಗವಾಯಿ ಅವರು ಈ ಅರ್ಜಿಯನ್ನು ವಜಾ ಮಾಡಿದ್ದರು. ಅಲ್ಲದೇ, “ಹೋಗಿ ಆ ದೇವರನ್ನೇ ಏನಾದರೂ ಮಾಡಲು ಕೇಳಿ,” ಎಂದು ಅವರು ಹೇಳಿದ್ದರು ಎನ್ನಲಾಗಿದೆ. ಈ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ನಂತರ, “ನನ್ನ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯದೇ ರೀತಿಯಲ್ಲಿ ಬಿಂಬಿಸಲಾಗಿದೆ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ,” ಎಂದು ಸಿಜೆಐ ಸ್ಪಷ್ಟನೆ ನೀಡಿದ್ದರು.
ಕೋರ್ಟ್‌ನಲ್ಲಿ ನಡೆದಿದ್ದೇನು? ಇದರ ಬೆನ್ನಲ್ಲೇ ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ, ಹಿರಿಯ ವಕೀಲರಾದ 71 ವರ್ಷದ ರಾಜೇಶ್ ಕಿಶೋರ್ ಅವರು ನ್ಯಾಯಪೀಠದ ಮುಂದೆ ಬಂದು ಸಿಜೆಐ ಅವರತ್ತ ಚಪ್ಪಲಿ ಎಸೆದರು. ಅದು ನ್ಯಾಯಪೀಠದ ಮುಂದೆ ಬಂದು ಬಿದ್ದಿತ್ತು. ಕೂಡಲೇ ಕಿಶೋರ್ ಅವರನ್ನು ಭದ್ರತಾ ಸಿಬ್ಬಂದಿ ಹೊರಗೆ ಎಳೆದೊಯ್ದರು. ಆದರೆ, ಈ ಗದ್ದಲದಿಂದ ವಿಚಲಿತರಾಗದ ಸಿಜೆಐ ಗವಾಯಿ, ವಿಚಾರಣೆಯನ್ನು ಸಾಮಾನ್ಯದಂತೆ ಮುಂದುವರಿಸಿದರು. ಅಲ್ಲದೇ “ಇಂತಹ ವಿಷಯಗಳಿಂದ ನಾನು ವಿಚಲಿತನಾಗುವುದಿಲ್ಲ. ದಯವಿಟ್ಟು ನಿಮ್ಮ ವಾದ-ಪ್ರತಿವಾದ ಮುಂದುವರಿಸಿ,” ಎಂದು ಅವರು ಅಲ್ಲಿದ್ದ ವಕೀಲರಿಗೆ ಹೇಳಿದ್ದರು. ಘಟನೆಯ ನಂತರ, ಭದ್ರತಾ ಸಂಸ್ಥೆಗಳು ವಿಚಾರಣೆಗಾಗಿ ಕಿಶೋರ್ ಅವರನ್ನು ವಶಕ್ಕೆ ಪಡೆದವಾದರೂ, ಆರೋಪಿ ವಕೀಲರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸ್ವತಃ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರೇ ರಿಜಿಸ್ಟ್ರಿಗೆ ಸೂಚನೆ ನೀಡಿದರು.
ವಕೀಲರ ಪರಿಷತ್ತಿನ ಕ್ರಮ : “ಆದಾಗ್ಯೂ, ಭಾರತೀಯ ವಕೀಲರ ಪರಿಷತ್ತು (Bar Council of India) ಕಿಶೋರ್ ಅವರನ್ನು ವಕೀಲಿಕೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಿಶೋರ್, “ಭಾರತೀಯ ವಕೀಲರ ಪರಿಷತ್ತು ಎಲ್ಲಾ ಮಿತಿಗಳನ್ನು ಮೀರಿದೆ. ಯಾವುದೇ ಶಿಸ್ತು ಸಮಿತಿಗೆ ವಿಷಯವನ್ನು ಉಲ್ಲೇಖಿಸದೆ ಮತ್ತು ನನ್ನ ವಾದವನ್ನು ಕೇಳದೆ ನನ್ನನ್ನು ಅಮಾನತುಗೊಳಿಸಿದೆ,” ಎಂದು ಆರೋಪಿಸಿದ್ದಾರೆ.