ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕಹಿ ಸುದ್ದಿಯೊಂದು ಕಾದಿದೆ. ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ (8th Pay Commission) ರಚನೆಗೆ ಅನುಮೋದನೆ ನೀಡಿದರೂ, ವೇತನ ಆಯೋಗದ ಶಿಫಾರಸುಗಳು ಜಾರಿಯಾಗುವುದು ಒಂದು ವರ್ಷ ವಿಳಂಬವಾಗಲಿದೆ ಎಂದು ತಿಳಿದುಬಂದಿದೆ. ಹಾಗಾಗಿ, ವೇತನ ಆಯೋಗವು 2026ರ ಏಪ್ರಿಲ್ ಬದಲಾಗಿ, 2027ರಲ್ಲಿಯೇ ನೌಕರರ ಸಂಬಳ ಹಾಗೂ ನಿವೃತ್ತ ನೌಕರರ ಪಿಂಚಣಿ ಜಾಸ್ತಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರವು ಕಳೆದ ಜನವರಿಯಲ್ಲೇ 8ನೇ ವೇತನ ಆಯೋಗದ ರಚನೆಗೆ ಅನುಮೋದನೆ ನೀಡಿದೆ. ಆದರೆ, ಅನುಮೋದನೆ ನೀಡಿ ಮೂರು ತಿಂಗಳು ಆಗುತ್ತಿದ್ದರೂ ಇದುವರೆಗೆ ವೇತನ ಆಯೋಗವನ್ನೇ ರಚನೆ ಮಾಡಿಲ್ಲ. ಈಗ ವೇತನ ಆಯೋಗ ರಚನೆ ಮಾಡಿ, ಅದು ಶಿಫಾರಸುಗಳನ್ನು ಸಲ್ಲಿಸಿ, ಕೇಂದ್ರ ಸರ್ಕಾರವು ಶಿಫಾರಸುಗಳಿಗೆ ಅನುಮೋದನೆ ನೀಡುವುದು ವಿಳಂಬವಾಗುತ್ತದೆ. 2027ಕ್ಕೂ ಮೊದಲು ವೇತನ ಹೆಚ್ಚಳ ಆಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಒಂದು ಸಮಾಧಾನಕರ ಸಂಗತಿ ಎಂದರೆ, 8ನೇ ವೇತನ ಆಯೋಗದ ಶಿಫಾರಸುಗಳ ಜಾರಿಯು ಒಂದು ವರ್ಷ ವಿಳಂಬವಾದರೂ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಒಂದು ವರ್ಷದ ಅರಿಯರ್ಸ್ ದೊರೆಯಲಿದೆ. ಹಾಗಾಗಿ, ನೌಕರರು ಹಾಗೂ ಪಿಂಚಣಿದಾರರು ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿದುಬಂದಿದೆ.
ಇಷ್ಟೊತ್ತಿಗಾಗಲೇ ವೇತನ ಆಯೋಗ ರಚನೆಯಾಗಬೇಕು. ವೇತನ ಆಯೋಗ ರಚನೆಯಾಗಿ, ಶಿಫಾರಸುಗಳನ್ನು ಸಲ್ಲಿಸಿದ್ದರೆ 2026ರ ಏಪ್ರಿಲ್ 1ರಿಂದಲೇ ಆಯೋಗದ ಶಿಫಾರಸುಗಳು ಜಾರಿಯಾಗುತ್ತಿದ್ದವು ಎನ್ನಲಾಗಿದೆ. ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದರೆ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 65 ಲಕ್ಷ ಪಿಂಚಣಿದಾರರು ಅನುಕೂಲ ಪಡೆಯಲಿದ್ದಾರೆ. ನೌಕರರಿಗೆ ಮಾಸಿಕ 19 ಸಾವಿರ ರೂ. ಸಂಬಳ ಜಾಸ್ತಿಯಾಗಲಿದೆ ಎಂದು ತಿಳಿದುಬಂದಿದೆ.