ಬೆಂಗಳೂರು : ಸಂಕಷ್ಟದಲ್ಲಿರುವ ಎಡ್-ಟೆಕ್ ಕಂಪನಿ ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಅಮೆರಿಕದ ನ್ಯಾಯಾಲಯ ಶಾಕ್ ನೀಡಿದೆ. ಕಂಪನಿಯ ಸಾಲದ ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಬೈಜು ರವೀಂದ್ರನ್ ಅವರು 1.07 ಬಿಲಿಯನ್ ಡಾಲರ್ (ಅಂದಾಜು 9,600 ಕೋಟಿ ರೂ.) ಪಾವತಿಸಬೇಕೆಂದು ಅಮೆರಿಕದ ನ್ಯಾಯಾಲಯ ಆದೇಶ ಹೊರಡಿಸಿದೆ.
ಬೈಜೂಸ್ ಅಮೆರಿಕದ ಸಾಲದಾತರಿಂದ ಪಡೆದಿದ್ದ 1.2 ಬಿಲಿಯನ್ ಡಾಲರ್ ಸಾಲದ ಹಣವನ್ನು ನಿರ್ವಹಿಸಲು ‘ಬೈಜೂಸ್ ಆಲ್ಫಾ’ ಎಂಬ ವಿಶೇಷ ಘಟಕವನ್ನು ಸ್ಥಾಪಿಸಿತ್ತು. ಆದರೆ, ಈ ಘಟಕದಿಂದ 533 ಮಿಲಿಯನ್ ಡಾಲರ್ ಹಣವನ್ನು ಮಿಯಾಮಿ ಮೂಲದ ‘ಕ್ಯಾಮ್‌ಶಾಫ್ಟ್ ಕ್ಯಾಪಿಟಲ್’ ಎಂಬ ಹೆಡ್ಜ್ ಫಂಡ್‌ಗೆ ಗುಟ್ಟಾಗಿ ವರ್ಗಾಯಿಸಲಾಗಿತ್ತು.
ಈ ಹಣದ ವರ್ಗಾವಣೆ ಮತ್ತು ಅದರ ನಂತರದ ಚಲನವಲನಗಳ ಬಗ್ಗೆ ಮಾಹಿತಿ ನೀಡುವಂತೆ ಕೋರ್ಟ್ ಸೂಚಿಸಿದ್ದರೂ, ಬೈಜು ರವೀಂದ್ರನ್ ಅವರು ದಾಖಲೆಗಳನ್ನು ಒದಗಿಸಲು ಅಥವಾ ವಿಚಾರಣೆಗೆ ಹಾಜರಾಗಲು ವಿಫಲರಾಗಿದ್ದರು. ಈ ಕಾರಣಕ್ಕಾಗಿ ಡೆಲವೇರ್ ಕೋರ್ಟ್‌ನ ನ್ಯಾಯಾಧೀಶ ಬ್ರೆಂಡನ್ ಶಾನನ್ ಅವರು ನವೆಂಬರ್ 20ರಂದು ಈ ಮಹತ್ವದ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ : ಕರಾವಳಿಯ ಕಂಬಳ ವೈಭವಕ್ಕೆ ವಿದೇಶಿ ಪ್ರವಾಸಿಗರು ಫಿದಾ!



















