ಮಂಗಳೂರು: ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ತುಂಬಿದ್ದ ಹಡಗು ಸಮುದ್ರ ಮಧ್ಯದಲ್ಲಿ ಮುಳುಗಡೆಯಾಗಿರುವ ಘಟನೆ ಮಂಗಳೂರು ಸಮುದ್ರ ತೀರದಿಂದ 60 ನಾಟಿಕಲ್ ಮೈಲ್ ದೂರದಲ್ಲಿ ನಡೆದಿದೆ. ಎಂಎಸ್ವಿ ಸಲಾಮತ್ ಹೆಸರಿನ ಮಂಗಳೂರಿನ ಸರಕು ಸಾಗಣೆ ಹಡಗು, 2025ರ ಮೇ 12ರಂದು ಮಂಗಳೂರು ಬಂದರಿನಿಂದ ಲಕ್ಷದ್ವೀಪದತ್ತ ಪ್ರಯಾಣ ಆರಂಭಿಸಿತ್ತು.

ಮೇ.18ರಂದು ಲಕ್ಷದ್ವೀಪದ ಕಡಮತ್ ದ್ವೀಪಕ್ಕೆ ತಲುಪುವ ಮುನ್ನ ದುರಂತ ಅವಘಡ ಸಂಭವಿಸಿದೆ. ಈ ಹಡಗಿನಲ್ಲಿ 06 ಸಿಬ್ಬಂದಿ ಸೇರಿದಂತೆ ಸಿಮೆಂಟ್ ಹಾಗೂ ನಿರ್ಮಾಣ ಸಾಮಗ್ರಿಗಳು ಇದ್ದವು. ಸಮುದ್ರ ಮಧ್ಯೆ ತಾಂತ್ರಿಕ ಸಮಸ್ಯೆಯಿಂದ ನೀರು ನುಗ್ಗಿದ್ದು, ಹಡಗು ಮುಳುಗಿದೆ.

ಈ ವೇಳೆ ಎಲ್ಲಾ 06 ಸಿಬ್ಬಂದಿ ಹಡಗಿನಿಂದ ಹಾರಿ ಸಣ್ಣ ಡಿಂಗಿ ಬೋಟಿನಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ. ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದೆ.