ನವದೆಹಲಿ: ಹೊಸ ಮಹೀಂದ್ರಾ ಥಾರ್ ಖರೀದಿಸಿದ ಖುಷಿಯಲ್ಲಿದ್ದ ಮಹಿಳೆಯೊಬ್ಬರು, ಶೋರೂಂನಲ್ಲೇ ವಾಹನಕ್ಕೆ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ನಿಂಬೆ ಹಣ್ಣಿನ ಮೇಲೆ ಚಕ್ರ ಹರಿಸಲು ಹೋಗಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ನಿಂಬೆ ಹಣ್ಣಿನ ಮೇಲೆ ಚಕ್ರ ಹರಿಸುವ ವೇಳೆ ಆಕಸ್ಮಿಕವಾಗಿ ಆಕ್ಸಿಲರೇಟರ್ ಒತ್ತಿ ಹಿಡಿದ ಪರಿಣಾಮ, ಸುಮಾರು 27 ಲಕ್ಷ ರೂಪಾಯಿ ಮೌಲ್ಯದ ಹೊಚ್ಚ ಹೊಸ ಥಾರ್, ಶೋರೂಂನ ಮೊದಲ ಮಹಡಿಯ ಗಾಜಿನ ಗೋಡೆ ಒಡೆದು ಕೆಳಗೆ ಬಿದ್ದು, ಸಂಪೂರ್ಣ ಹಾನಿಗೀಡಾಗಿದೆ!

ದೆಹಲಿಯಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಘಾಜಿಯಾಬಾದ್‌ನ ಇಂದಿರಾಪುರಂ ನಿವಾಸಿ, 29 ವರ್ಷದ ಮಾನಿ ಪವಾರ್, ದೆಹಲಿಯ ನಿರ್ಮಾಣ ವಿಹಾರದಲ್ಲಿರುವ ಮಹೀಂದ್ರಾ ಶೋರೂಂಗೆ ತಮ್ಮ ಹೊಚ್ಚ ಹೊಸ ಥಾರ್ ಪಡೆಯಲು ಬಂದಿದ್ದರು. ವಾಹನವನ್ನು ರಸ್ತೆಗೆ ಇಳಿಸುವ ಮೊದಲು, ಶೋರೂಂನ ಮೊದಲ ಮಹಡಿಯಲ್ಲೇ ಪೂಜೆ ಸಲ್ಲಿಸಿ, ನಿಂಬೆ ಹಣ್ಣನ್ನು ಕಾರಿನ ಚಕ್ರದ ಕೆಳಗೆ ಇಟ್ಟು ಅದರ ಮೇಲೆ ಹರಿಸಲು ಮುಂದಾಗಿದ್ದಾರೆ.
ನಿಧಾನವಾಗಿ ಕಾರನ್ನು ಚಲಾಯಿಸುವ ಬದಲು, ಅವರು ಜೋರಾಗಿ ಆಕ್ಸಲರೇಟರ್ ಒತ್ತಿದ್ದಾರೆ. ಪರಿಣಾಮವಾಗಿ, ಕಾರು ವೇಗವಾಗಿ ಮುಂದೆ ಚಲಿಸಿ, ಶೋರೂಂನ ಗಾಜಿನ ಗೋಡೆಯನ್ನು ಒಡೆದುಕೊಂಡು ಮೊದಲ ಮಹಡಿಯಿಂದ ಕೆಳಗಿನ ಪಾದಚಾರಿ ಮಾರ್ಗದ ಮೇಲೆ ಬಿದ್ದಿದೆ.
ಘಟನೆಯ ನಂತರದ ವಿಡಿಯೋದಲ್ಲಿ, ಕಾರು ರಸ್ತೆಯಲ್ಲಿ ತಲೆಕೆಳಗಾಗಿ ಬಿದ್ದಿರುವುದು ಕಂಡುಬಂದಿದೆ. ಕಾರಿನಲ್ಲಿದ್ದ ಮಾನಿ ಪವಾರ್ ಮತ್ತು ವಿಕಾಸ್ ಎಂಬ ಶೋರೂಂ ಉದ್ಯೋಗಿಯ ರಕ್ಷಣೆಗೆ ಏರ್‌ಬ್ಯಾಗ್‌ಗಳು ತಕ್ಷಣವೇ ತೆರೆದುಕೊಂಡಿವೆ. ಇಬ್ಬರನ್ನೂ ಸಮೀಪದ ಮಲಿಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಥಮ ಚಿಕಿತ್ಸೆಯ ನಂತರ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಪೂರ್ವ ದೆಹಲಿ ಪೊಲೀಸ್ ಉಪ ಆಯುಕ್ತ ಅಭಿಷೇಕ್ ಧನಿಯಾ ತಿಳಿಸಿದ್ದಾರೆ.
ಈ ಘಟನೆಯಲ್ಲಿ ಬೇರೆ ಯಾರಿಗೂ ಗಾಯಗಳಾಗಿಲ್ಲ ಮತ್ತು ಯಾರಿಂದಲೂ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.