ವಾಷಿಂಗ್ಟನ್ : ಜಗತ್ತಿನ ಪ್ರತಿಷ್ಠಿತ ದಿನಪತ್ರಿಕೆಗಳಲ್ಲಿ ಒಂದಾದ ‘ದಿ ವಾಷಿಂಗ್ಟನ್ ಪೋಸ್ಟ್’ (The Washington Post) ತನ್ನ ಸಂಸ್ಥೆಯಲ್ಲಿ ಐತಿಹಾಸಿಕ ಎನ್ನಬಹುದಾದ ಬೃಹತ್ ಉದ್ಯೋಗ ಕಡಿತ ಘೋಷಿಸಿದೆ. ಸುದ್ದಿ ಸಂಸ್ಥೆಯ ಪುನಾರಚನೆ ಭಾಗವಾಗಿ ಸುಮಾರು ಮೂರನೇ ಒಂದು ಭಾಗದಷ್ಟು ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗಿದ್ದು, ಇವರಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪುತ್ರ, ಅಂತಾರಾಷ್ಟ್ರೀಯ ಅಂಕಣಕಾರ ಇಶಾನ್ ತರೂರ್ ಕೂಡ ಸೇರಿದ್ದಾರೆ.
ಜೆಫ್ ಬೆಜೋಸ್ ಮಾಲೀಕತ್ವದ ಈ ಸಂಸ್ಥೆಯು ತನ್ನ ಕ್ರೀಡಾ ವಿಭಾಗ ಮತ್ತು ಹಲವು ಅಂತಾರಾಷ್ಟ್ರೀಯ ಬ್ಯೂರೋಗಳನ್ನು ಮುಚ್ಚಲು ಕೂಡ ನಿರ್ಧರಿಸಿದೆ. ಕಳೆದ 12 ವರ್ಷಗಳಿಂದ ವಾಷಿಂಗ್ಟನ್ ಪೋಸ್ಟ್ ಜೊತೆಗೆ ಗುರುತಿಸಿಕೊಂಡಿದ್ದ ಇಶಾನ್ ತರೂರ್, ಇದೀಗ ನಡೆದ ಈ ದಿಢೀರ್ ಬೆಳವಣಿಗೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಬರೆದುಕೊಂಡಿರುವ ಅವರು, “ಇಂದು ನನ್ನನ್ನು ವಾಷಿಂಗ್ಟನ್ ಪೋಸ್ಟ್‌ನಿಂದ ವಜಾಗೊಳಿಸಲಾಗಿದೆ. ನನ್ನೊಂದಿಗೆ ಅಂತಾರಾಷ್ಟ್ರೀಯ ವಿಭಾಗದ ಬಹುತೇಕ ಸಿಬ್ಬಂದಿ ಮತ್ತು ಅನೇಕ ಅದ್ಭುತ ಸಹೋದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ನಮ್ಮ ಸುದ್ದಿ ಸಂಸ್ಥೆ ಮತ್ತು ವಿಶೇಷವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ವರ್ಲ್ಡ್ ವ್ಯೂ’ ಮೂಲಕ ಜಾಗತಿಕ ಗಮನ ಸೆಳೆದಿದ್ದ ಇಶಾನ್
2017ರಲ್ಲಿ ಇಶಾನ್ ತರೂರ್ ಅವರು ವಾಷಿಂಗ್ಟನ್ ಪೋಸ್ಟ್‌ನಲ್ಲಿ ‘ವರ್ಲ್ಡ್ ವ್ಯೂ’ (WorldView) ಎಂಬ ಜನಪ್ರಿಯ ಅಂಕಣವನ್ನು ಪ್ರಾರಂಭಿಸಿದ್ದರು. ಅಮೆರಿಕದ ಜಾಗತಿಕ ಸ್ಥಾನಮಾನ ಮತ್ತು ವಿಶ್ವದ ವಿವಿಧ ವಿದ್ಯಮಾನಗಳನ್ನು ಓದುಗರಿಗೆ ಅರ್ಥ ಮಾಡಿಸುವ ಉದ್ದೇಶದಿಂದ ಈ ಅಂಕಣ ಆರಂಭವಾಗಿತ್ತು. “ವರ್ಷಗಳಿಂದ ವಾರಕ್ಕೆ ಹಲವಾರು ಬಾರಿ ಈ ಅಂಕಣವನ್ನು ಓದುತ್ತಿದ್ದ ಲಕ್ಷಾಂತರ ನಿಷ್ಠಾವಂತ ಚಂದಾದಾರರಿಗೆ ನಾನು ಕೃತಜ್ಞನಾಗಿದ್ದೇನೆ,” ಎಂದು ಇಶಾನ್ ಸ್ಮರಿಸಿದ್ದಾರೆ.
ತಮ್ಮ ಕಚೇರಿಯ “Democracy Dies in Darkness”(ಕಗ್ಗತ್ತಲಲ್ಲಿ ಪ್ರಜಾಪ್ರಭುತ್ವ ಸಾಯುತ್ತದೆ) ಎಂಬ ಘೋಷವಾಕ್ಯವಿರುವ ಪೋಸ್ಟರ್ ಚಿತ್ರವನ್ನು ಹಂಚಿಕೊಂಡ ಅವರು, “ಇದು ಒಂದು ಕರಾಳ ದಿನ” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಅವರ ತಂದೆ ಶಶಿ ತರೂರ್ ಕೂಡ ಮರುಹಂಚಿಕೊಂಡಿದ್ದಾರೆ.
ವಾಷಿಂಗ್ಟನ್ ಪೋಸ್ಟ್‌ನ ಈ ನಿರ್ಧಾರವು ಜಾಗತಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ. ಸಂಸ್ಥೆಯ ಅಂತಾರಾಷ್ಟ್ರೀಯ ವರದಿಗಾರರ ತಂಡ, ಸ್ಥಳೀಯ ವರದಿಗಾರರು ಮತ್ತು ಕ್ರೀಡಾ ವಿಭಾಗದ ಮೇಲೆ ಈ ಉದ್ಯೋಗ ಕಡಿತ ಭಾರಿ ಹೊಡೆತ ನೀಡಿದೆ. ಸುದ್ದಿ ಸಂಸ್ಥೆಯ ಈ ದಿಢೀರ್ ನಿರ್ಧಾರವು ಜಾಗತಿಕ ಮಟ್ಟದಲ್ಲಿ ಅದರ ಪ್ರಭಾವವನ್ನು ಕುಗ್ಗಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : ಕಿಡಿ ಹೊತ್ತಿಸಿದ ಮಧುಮಾಲತಿ.. ಸಂಸದ ಬೋಸ್‌ಗೆ ಭೀತಿ? ಮೆಸೇಜ್ ಪೋಸ್ಟ್ & ಡಿಲೀಟ್.. ಏನಿದು ವಾರ್ನಿಂಗ್ ಬೆಲ್?



















