ನವದೆಹಲಿ: ತಿರುವನಂತಪುರ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ದಕ್ಷಿಣ ಭಾರತದ ಜನಪ್ರಿಯ ತಿಂಡಿ ಇಡ್ಲಿಯ ಬಗ್ಗೆ ಬರೆದ ಕಾವ್ಯಾತ್ಮಕ ಹೊಗಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಡ್ಲಿಯನ್ನು “ಬೇಯಿಸಲ್ಪಟ್ಟ ವಿಷಾದ” (steamed regret) ಎಂದು ಕರೆದ ಇಂಟರ್ನೆಟ್ ಬಳಕೆದಾರರೊಬ್ಬರಿಗೆ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಉತ್ತರಿಸಿದ ತರೂರ್, ಇಡ್ಲಿಯು ಕೇವಲ ತಿಂಡಿಯಲ್ಲ, ಅದೊಂದು ಕಲೆ ಎಂದು ಬಣ್ಣಿಸಿದ್ದಾರೆ.
ಅಲ್ಲದೇ ಇಡ್ಲಿಯನ್ನು ಟೀಕಿಸಿದವರನ್ನು “ಬಡಪಾಯಿ” ಎಂದು ಕರೆದಿರುವ ತರೂರ್, ಅವರು ಖಂಡಿತ ಈವರೆಗೆ ಉತ್ತಮವಾದ ಇಡ್ಲಿಯನ್ನು ತಿಂದಿರಲಿಕ್ಕಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. “ನಿಜವಾಗಿಯೂ ಉತ್ತಮವಾದ ಇಡ್ಲಿಯು ಒಂದು ಮೋಡ, ಒಂದು ಪಿಸುಮಾತು, ಮಾನವ ನಾಗರಿಕತೆಯ ಪರಿಪೂರ್ಣತೆಯ ಒಂದು ಸುಂದರ ಕನಸು” ಎಂದು ಅವರು ಬಣ್ಣಿಸಿದ್ದಾರೆ.
ಇಡ್ಲಿಗೆ ಕಲಾತ್ಮಕ ಹೋಲಿಕೆ
ಶಶಿ ತರೂರ್ ಅವರು ಇಡ್ಲಿಯನ್ನು ಕೇವಲ ಆಹಾರವಾಗಿ ನೋಡದೆ, ಅದನ್ನು ಜಗತ್ತಿನ ಶ್ರೇಷ್ಠ ಕಲಾ ಪ್ರಕಾರಗಳಿಗೆ ಹೋಲಿಸಿದ್ದಾರೆ. ಸರಿಯಾದ ಕಾಂಬಿನೇಷನ್ ನೊಂದಿಗೆ(ನಿರ್ದಿಷ್ಟ ಸಾಂಬಾರು, ಚಟ್ನಿ ಇತ್ಯಾದಿ) ಸೇವಿಸಿದಾಗ ಇಡ್ಲಿಯು, ಬೀಥೋವನ್‌ನ ಸ್ವರಮೇಳ, ಟ್ಯಾಗೋರ್ ಸಂಗೀತ, ಹುಸೇನ್ ಅವರ ವರ್ಣಚಿತ್ರ, ತೆಂಡೂಲ್ಕರ್ ಅವರ ಶತಕಕ್ಕೆ ಸಮಾನವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಕ್ಕಿ ಮತ್ತು ಉದ್ದಿನಬೇಳೆಯಿಂದ ಮಾಡಿದ ಈ “ನಾಜೂಕಾದ, ತೂಕವಿಲ್ಲದ ತುತ್ತು” ದಕ್ಷಿಣ ಭಾರತದ ಅತ್ಯುತ್ತಮ ಸಂಸ್ಕೃತಿಯ ಸಾಧನೆಗಳಲ್ಲಿ ಒಂದು ಎಂದು ಅವರು ಹೇಳಿದ್ದಾರೆ. ಇಂತಹ ಅದ್ಭುತ ಸೃಷ್ಟಿಯನ್ನು “ವಿಷಾದ” ಎಂದು ಕರೆಯುವುದು ಎಂದರೆ, ಅವರಿಗೆ ಆತ್ಮ, ರುಚಿ ಮತ್ತು ದಕ್ಷಿಣ ಭಾರತದ ಸಂಸ್ಕೃತಿಯ ಶ್ರೇಷ್ಠ ಸಾಧನೆಗಳ ಬಗ್ಗೆ ಯಾವುದೇ ಮೆಚ್ಚುಗೆ ಇಲ್ಲ ಎಂದು ತರೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮ ಪೋಸ್ಟ್‌ನೊಂದಿಗೆ, ಸಾಂಪ್ರದಾಯಿಕ ಉಡುಗೆಯಲ್ಲಿ ಅಡುಗೆಮನೆಯಲ್ಲಿ ಇಡ್ಲಿ ತಯಾರಿಸುತ್ತಿರುವಂತೆ ಕಾಣುವ ಕೃತಕ ಬುದ್ಧಿಮತ್ತೆ (AI) ಆಧಾರಿತ ಚಿತ್ರವೊಂದನ್ನು ಸಹ ಅವರು ಹಂಚಿಕೊಂಡಿದ್ದಾರೆ. ಈ ಮೂಲಕ, ಇಡ್ಲಿಯ ಮೇಲಿನ ಅವರ ಪ್ರೀತಿಯು ಕೇವಲ ಒಂದು ಉಪಾಹಾರದ ವಸ್ತುವನ್ನು ಮೀರಿದ್ದು, ಅದೊಂದು ಉನ್ನತ ಕಲೆಯ ಮಟ್ಟದಲ್ಲಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.