ನವದೆಹಲಿ: ಕೇರಳದ ವಿಳಿಂಜಂ ಅಂತಾರಾಷ್ಟ್ರೀಯ ಬಂದರು(Modi In Kerala) ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಯೊಂದು ಭಾರೀ ಸದ್ದು ಮಾಡಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೆಸರನ್ನು ಉಲ್ಲೇಖಿಸಿಯೇ ಮಾತನಾಡಿದ ಪ್ರಧಾನಿ ಮೋದಿ, “ಇಂದಿನ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಉಪಸ್ಥಿತಿಯು ಕೆಲವರ ನಿದ್ರೆಗೆ ಭಂಗ ತರಲಿದೆ” ಎಂದು ಹೇಳಿದ್ದಾರೆ. ಈ ಮೂಲಕ ಅವರು ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದಾರೆ.
“ಇಂದು ಶಶಿ ತರೂರ್ ಅವರು ಇಲ್ಲೇ ಕುಳಿತಿದ್ದಾರೆ. ಇಂದಿನ ಕಾರ್ಯಕ್ರಮವು ಕೆಲವು ಜನರ ನಿದ್ರೆಗೆ ಭಂಗ ತರಲಿದೆ. ಸಂದೇಶವು ಎಲ್ಲಿಗೆ ಹೋಗಬೇಕಿತ್ತೋ ಅಲ್ಲಿಗೆ ಹೋಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ತಿರುವನಂತಪುರ ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್ ಸಂಸದರಾಗಿರುವ ತರೂರ್ ಅವರನ್ನು ಪ್ರಧಾನಿ ನೇರವಾಗಿ ಉಲ್ಲೇಖಿಸಿರುವುದಲ್ಲದೇ ಸಾರ್ವಜನಿಕವಾಗಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಮುಂಜಾನೆ ಪ್ರಧಾನಿ ಮೋದಿಯವರು ತಿರುವನಂತಪುರ ತಲುಪಲು ವಿಳಂಬವಾದರೂ, ಶಶಿ ತರೂರ್ ಅವರು ವಿಮಾನ ನಿಲ್ದಾಣಕ್ಕೆ ತೆರಳಿ ಅವರನ್ನು ವೈಯಕ್ತಿಕವಾಗಿ ಸ್ವಾಗತಿಸಿರುವುದು ಕೂಡ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ತರೂರ್ ಅವರು ಪ್ರಧಾನಿ ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ನಾಯಕತ್ವದೊಂದಿಗೆ ವಿಶೇಷವಾಗಿ ಕೇರಳ ಕಾಂಗ್ರೆಸ್ ನೊಂದಿಗೆ ತರೂರ್ ಸಂಬಂಧ ಹದಗೆಟ್ಟಿರುವ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿರುವಂತೆಯೇ ತರೂರ್ ಅವರು ಮೋದಿ ಜೊತೆ ವೇದಿಕೆ ಹಂಚಿಕೊಂಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ತರೂರ್ ಅವರು ರಾಜ್ಯ ಕಾಂಗ್ರೆಸ್ ಘಟಕದಲ್ಲಿನ ನಾಯಕತ್ವ ಶೂನ್ಯತೆ ಬಗ್ಗೆ ಮಾತನಾಡುವ ಮೂಲಕ ಸ್ಥಳೀಯ ಕಾಂಗ್ರೆಸಿಗರ ಕೆಂಗಣ್ಣಿಗೂ ಗುರಿಯಾಗಿದ್ದರು. ಅಲ್ಲದೇ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಜೊತೆಗೂ ತರೂರ್ ರಾಜ್ಯದಲ್ಲಿನ ಪಕ್ಷದ ಸ್ಥಿತಿಗತಿ ಕುರಿತು ಚರ್ಚಿಸಿದ್ದರೂ, ಯಾವುದೇ ಸಕಾರಾತ್ಮಕ ಪರಿಣಾಮ ಕಂಡುಬಂದಿರಲಿಲ್ಲ.
ಇವುಗಳ ನಡುವೆಯೇ, ಮಾರ್ಚ್ ನಲ್ಲಿ ಕೇರಳ ಬಿಜೆಪಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ರಾಜೀವ್ ಚಂದ್ರಶೇಖರ್ ಅವರು, ಭಾರತದ ಲಸಿಕೆ ರಾಜತಾಂತ್ರಿಕತೆ ಮತ್ತು ರಷ್ಯಾ-ಉಕ್ರೇನ್ ಸಂಘರ್ಷವನ್ನು ಕೇಂದ್ರ ಸರ್ಕಾರ ನಿಭಾಯಿಸಿದ ರೀತಿಯನ್ನು ಹೊಗಳಿದ್ದ ತರೂರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೋದಿ ಸರ್ಕಾರದ ಸಾಧನೆಗಳನ್ನು ಗುರುತಿಸಿದ್ದಕ್ಕೆ ಧನ್ಯವಾದಗಳನ್ನೂ ತಿಳಿಸಿದ್ದರು.
ಇದರ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಯಾವುದೇ ಒಳಜಗಳ ಇಲ್ಲ ಎನ್ನುವುದನ್ನು ಬಿಂಬಿಸಲು ಪ್ರಯತ್ನಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇರಳದ ಕಾಂಗ್ರೆಸ್ ನಾಯಕರ ಗ್ರೂಪ್ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ಪ್ರಧಾನಿ ಮೋದಿ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲೇ ತರೂರ್ ಬಗ್ಗೆ ಮೆಚ್ಚುಗೆ ಸೂಚಿಸಿ, ಕಾಂಗ್ರೆಸ್ ನಾಯಕತ್ವದ ಬಗ್ಗೆ ಲೇವಡಿ ಮಾಡಿರುವ ಕಾರಣ, ಕಾಂಗ್ರೆಸ್ ನ ಮುಂದಿನ ನಡೆ ಬಗ್ಗೆ ಕುತೂಹಲ ಹೆಚ್ಚಿದೆ.



















