ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸುವ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ವಿಮಾನ ಅಪಘಾತದಲ್ಲಿ ಮಡಿದ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡುವ ನಿರ್ಧಾರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಇಂದು ಸ್ಪಷ್ಟಪಡಿಸಿದ್ದಾರೆ.
ಅಜಿತ್ ಪವಾರ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಕ ಮಾಡುವ ನಿರ್ಧಾರವನ್ನು ಎನ್‌ಸಿಪಿ ಪಕ್ಷವು ಸ್ವತಂತ್ರವಾಗಿ ತೆಗೆದುಕೊಂಡಿದೆಯೇ ಹೊರತು, ಈ ಬಗ್ಗೆ ಪವಾರ್ ಕುಟುಂಬದೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಮೂಲಕ ಸುದ್ಧಿ ತಿಳಿಯಿತು
ಬಾರಾಮತಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ನಾಯಕ ಶರದ್ ಪವಾರ್, ಶನಿವಾರ ಸಂಜೆ ನಡೆಯಲಿರುವ ಪ್ರಮಾಣವಚನ ಸಮಾರಂಭದ ಕುರಿತು ತಮಗೆ ಮಾಧ್ಯಮಗಳ ಮೂಲಕವಷ್ಟೇ ಮಾಹಿತಿ ಲಭಿಸಿದೆ ಎಂದು ತಿಳಿಸಿದರು. ಅಜಿತ್ ಪವಾರ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಿಂದ ತಮ್ಮನ್ನು ಹೊರಗಿಡಲಾಗಿದೆಯೇ ಎಂಬ ಪ್ರಶ್ನೆಗೆ, “ಅದು ನನಗೆ ತಿಳಿದಿಲ್ಲ, ಈ ಬಗ್ಗೆ ನನ್ನನ್ನು ಯಾರೂ ಸಂಪರ್ಕಿಸಿಲ್ಲ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಈ ಹೇಳಿಕೆಯು ಪವಾರ್ ಕುಟುಂಬ ಮತ್ತು ಪಕ್ಷದ ಎರಡು ಬಣಗಳ ನಡುವಿನ ರಾಜಕೀಯ ಬಿರುಕು ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಿದೆ.
ಅಜಿತ್ ಪವಾರ್ ಕಂಡಿದ್ದ ‘ಒಕ್ಕೂಟ’ದ ಕನಸು ಭಗ್ನ
ಕಳೆದ ಬುಧವಾರ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಮೃತಪಟ್ಟಿದ್ದು, ಅವರ ನಿಧನದ ನಂತರ ಹಲವು ಆಂತರಿಕ ವಿಷಯಗಳು ಹೊರಬರುತ್ತಿವೆ. ಎನ್‌ಸಿಪಿ (ಎಸ್‌ಪಿ) ನಾಯಕ ಅಂಕುಶ್ ಕಾಕಡೆ ಅವರ ಪ್ರಕಾರ, ಇಬ್ಭಾಗವಾಗಿದ್ದ ಎನ್‌ಸಿಪಿ ಪಕ್ಷವನ್ನು ಮತ್ತೆ ಒಂದುಗೂಡಿಸಲು ಅಜಿತ್ ಪವಾರ್ ತೀವ್ರ ಆಕಾಂಕ್ಷೆ ಹೊಂದಿದ್ದರು. ಕಳೆದ ಡಿಸೆಂಬರ್ 12 ರಂದು ಶರದ್ ಪವಾರ್ ಅವರ ಜನ್ಮದಿನದಂದು ಪಕ್ಷದ ವಿಲೀನವನ್ನು ಉಡುಗೊರೆಯಾಗಿ ನೀಡಲು ಅವರು ಯೋಜಿಸಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಫೆಬ್ರವರಿ 12 ರಂದು ಅಧಿಕೃತವಾಗಿ ಒಗ್ಗೂಡುವ ಬಗ್ಗೆ ಜನವರಿ 17 ರಂದು ನಡೆದಿದ್ದ ಗುಪ್ತ ಸಭೆಯಲ್ಲಿ ಚರ್ಚಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆದರೆ, ಇತ್ತೀಚೆಗೆ ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದ ಲಿಯರ್‌ಜೆಟ್ 45 ವಿಮಾನವು ಎರಡನೇ ಬಾರಿಗೆ ಲ್ಯಾಂಡಿಂಗ್ ಮಾಡಲು ಯತ್ನಿಸಿದಾಗ ಸಂಭವಿಸಿದ ಅಪಘಾತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿದ್ದರು. ಪೈಲಟ್ ಸುಮತ್ ಕಪೂರ್, ಸಹ-ಪೈಲಟ್ ಶಾಂಭವಿ ಪಾಠಕ್ ಮತ್ತು ಭದ್ರತಾ ಅಧಿಕಾರಿಗಳು ಈ ದುರಂತಕ್ಕೆ ಬಲಿಯಾಗಿದ್ದರು. ಅಜಿತ್ ಪವಾರ್ ಅವರ ನಿಧನವು ರಾಜ್ಯ ರಾಜಕಾರಣದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಈಗ ಅವರ ಪತ್ನಿ ಸುನೇತ್ರಾ ಪವಾರ್ ರಾಜಕೀಯ ಮುನ್ನೆಲೆಗೆ ಬರುತ್ತಿದ್ದರೂ, ಕುಟುಂಬದ ಹಿರಿಯ ಸದಸ್ಯರಾದ ಶರದ್ ಪವಾರ್ ಅವರ ಅಸಮಾಧಾನವು ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಇದನ್ನೂ ಓದಿ: ಬನ್ನೇರುಘಟ್ಟದ ಕಾಸಾಗ್ರ‍್ಯಾಂಡ್‌ನಲ್ಲಿ ಡಾ.ಸಿಜೆ ರಾಯ್ ಅಂತ್ಯಕ್ರಿಯೆ!



















