ಕೋಲ್ಕತ್ತಾ: ಪ್ರಸಿದ್ಧ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ ಟೂರ್ನಿಯ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮೈದಾನದಲ್ಲಿ ಆಟಗಾರರು ರನ್ ಗಳಿಸಲು ಪರದಾಡುತ್ತಿದ್ದರೆ, ಇತ್ತ ಗ್ಯಾಲರಿಯಲ್ಲಿ ಕೆಕೆಆರ್ ತಂಡದ ಸಹ-ಮಾಲೀಕ ಹಾಗೂ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರು ತಂಡದ ಸಿಇಒ ವೆಂಕಿ ಮೈಸೂರ್ ಅವರೊಂದಿಗೆ ಬಿರುಸಿನ ಚರ್ಚೆಯಲ್ಲಿ ತೊಡಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ತಮ್ಮ ತಂಡದ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ಶಾರುಖ್ ಖಾನ್, ತಂಡದ ಕಳಪೆ ಪ್ರದರ್ಶನ ಕಂಡು ತೀವ್ರ ಅಸಮಾಧಾನಗೊಂಡಿರುವುದು ಅವರ ಹಾವಭಾವಗಳಿಂದ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಪಂದ್ಯದ ವೇಳೆ ಕ್ಯಾಮೆರಾಗಳು ಪದೇ ಪದೇ ಶಾರುಖ್ ಖಾನ್ ಅವರತ್ತ ಮುಖ ಮಾಡಿದಾಗಲೆಲ್ಲಾ, ಅವರು ವೆಂಕಿ ಮೈಸೂರ್ ಅವರೊಂದಿಗೆ ಗಂಭೀರ ಹಾಗೂ ಕೊಂಚ ಕೋಪದಿಂದಲೇ ಮಾತನಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ.
ನಿರಾಶಾದಾಯಕ ಪ್ರದರ್ಶನ
ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಆರಂಭ ಅತ್ಯಂತ ನಿರಾಸದಾಯಕವಾಗಿದೆ. ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಸೋಲುಂಡಿರುವ ಅಜಿಂಕ್ಯ ರಹಾನೆ ಪಡೆ, ಪಂಜಾಬ್ ಕಿಂಗ್ಸ್ ವಿರುದ್ಧವೂ ಕಳಪೆ ಆರಂಭ ಪಡೆದಿದೆ. ಪಂದ್ಯದ ಆರಂಭದಲ್ಲೇ ಕೇವಲ 25 ರನ್‌ಗಳಿಗೆ 2 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ತಂಡವು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 6 ರನ್ ಗಳಿಸಿದ್ದ ಫಿನ್ ಅಲೆನ್ ಹಾಗೂ 4 ರನ್ ಗಳಿಸಿದ್ದ ಕ್ಯಾಮರೂನ್ ಗ್ರೀನ್ ಅವರು ಪಂಜಾಬ್ ವೇಗಿ ಕ್ಸೇವಿಯರ್ ಬಾರ್ಟ್ಲೆಟ್ ಅವರ ಒಂದೇ ಓವರ್‌ನಲ್ಲಿ ಪೆವಿಲಿಯನ್ ಸೇರುವ ಮೂಲಕ ಕೆಕೆಆರ್ ಪಾಳಯದಲ್ಲಿ ಆತಂಕ ಮೂಡಿಸಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲೂ ಆಟಗಾರರು ಗೆಲ್ಲುವ ಹಂಬಲವನ್ನೇ (ಇಂಟೆಂಟ್) ತೋರಿಸದಿರುವುದು ಫ್ರಾಂಚೈಸಿ ಮಾಲೀಕರ ಕೋಪಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಟೀಕೆಗೆ ಗುರಿಯಾದ ನಿರ್ಧಾರಗಳು
ಪಂದ್ಯದ ಟಾಸ್ ಪ್ರಕ್ರಿಯೆಯಿಂದಲೇ ನಾಯಕ ಅಜಿಂಕ್ಯ ರಹಾನೆ ಅವರ ನಿರ್ಧಾರಗಳು ತೀವ್ರ ಟೀಕೆಗೆ ಗುರಿಯಾಗಿವೆ. ಮಳೆಯ ಮುನ್ಸೂಚನೆ ಹಾಗೂ ಮೋಡ ಕವಿದ ವಾತಾವರಣವಿದ್ದರೂ ಟಾಸ್ ಗೆದ್ದ ರಹಾನೆ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದು ಕ್ರಿಕೆಟ್ ಪಂಡಿತರ ಅಚ್ಚರಿಗೆ ಕಾರಣವಾಯಿತು. ಕೆವಿನ್ ಪೀಟರ್ಸನ್, ಅನಿಲ್ ಕುಂಬ್ಳೆ ಹಾಗೂ ರವಿಚಂದ್ರನ್ ಅಶ್ವಿನ್ ಅವರಂತಹ ದಿಗ್ಗಜರು ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತು ರಹಾನೆ ಅವರ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದರು. ಇದೇ ವೇಳೆ ಟಿವಿ ಪರದೆಯ ಮೇಲೆ ಶಾರುಖ್ ಹಾಗೂ ವೆಂಕಿ ಮೈಸೂರ್ ಅವರ ಚರ್ಚೆಯ ದೃಶ್ಯಗಳು ಮೂಡಿಬಂದಾಗ, ಕಾಮೆಂಟೇಟರ್‌ಗಳು ಕೂಡ ಇದೇ ಕಳಪೆ ನಿರ್ಧಾರದ ಬಗ್ಗೆ ಫ್ರಾಂಚೈಸಿ ಮಾಲೀಕರು ಸಿಇಒ ಬಳಿ ಪ್ರಶ್ನಿಸುತ್ತಿರಬಹುದು ಎಂದು ಅಭಿಪ್ರಾಯಪಟ್ಟರು. ಮಳೆಯ ಕಾರಣದಿಂದ ಪಂದ್ಯ ಸ್ವಲ್ಪ ಸಮಯ ಸ್ಥಗಿತಗೊಂಡಿದ್ದಾಗಲೂ ಶಾರುಖ್ ಖಾನ್ ಅವರು ತಮ್ಮ ಮಗಳು ಸುಹಾನಾ ಖಾನ್ ಹಾಗೂ ಮ್ಯಾನೇಜರ್ ಪೂಜಾ ದದ್ಲಾನಿ ಅವರ ಜೊತೆಗಿದ್ದುಕೊಂಡೇ ವೆಂಕಿ ಮೈಸೂರ್ ಜೊತೆಗಿನ ಮಾತುಕತೆಯನ್ನು ಮುಂದುವರಿಸಿದ್ದರು.
ಇದನ್ನೂ ಓದಿ : ಮಳೆಯ ನಡುವೆ ರಹಾನೆ ‘ಬ್ಯಾಟಿಂಗ್’ ಸಾಹಸ : ಕೆಕೆಆರ್ ನಾಯಕನ ನಿರ್ಧಾರಕ್ಕೆ ಅಶ್ವಿನ್ ಟಾಂಗ್


















