ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಭರ್ಜರಿ ದ್ವಿಶತಕ ಸಿಡಿಸಿರುವ ಭಾರತೀಯ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (Shafali Verma) ಹಲವು ದಾಖಲೆಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದ ಶಫಾಲಿ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದ್ದಾರೆ. ಪರಿಣಾಮ ಕೇವಲ 113 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ನಂತರ ಅವರ ಬ್ಯಾಟ್ ಗೆ ಮತ್ತಷ್ಟು ವೇಗ ನೀಡಿದ್ದರು. 20ರ ಹರೆಯದ ಭಾರತೀಯ ಓಪನರ್ 196 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ದ್ವಿಶತಕದ ಬೆನ್ನಲ್ಲೇ 197 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 23 ಫೋರ್ಗಳೊಂದಿಗೆ 205 ರನ್ ಗಳಿಸಿ ಔಟ್ ಆಗಿದ್ದಾರೆ. ಅವರು ಗಳಿಸಿದ್ದ 205 ರನ್ ಗಳೊಂದಿಗೆ ಶಫಾಲಿ ವರ್ಮಾ ಟೆಸ್ಟ್ ಕ್ರಿಕೆಟ್ ನಲ್ಲಿ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಮಹಿಳಾ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಶಫಾಲಿ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಜಾನೆಟ್ ಬ್ರಿಟಿನ್ ಹೆಸರಿನಲ್ಲಿತ್ತು. 1984 ರಲ್ಲಿ ಇಂಗ್ಲೆಂಡ್ ಆಟಗಾರ್ತಿ ಜಾನೆಟ್ ಬ್ರಿಟಿನ್ 137 ಎಸೆತಗಳಲ್ಲಿ ಶತಕ ಸಿಡಿಸಿದ್ದ ಸಾಧನೆ ಮಾಡಿದ್ದರು. ಆದರೆ, ಶಫಾಲಿ ವರ್ಮಾ ಕೇವಲ 113 ಎಸೆತಗಳಲ್ಲಿ ಈ ದಾಖಲೆ ಬರೆದಿದ್ದಾರೆ.

197 ಬಾಲ್ಗಳಲ್ಲಿ ಡಬಲ್ ಸೆಂಚುರಿ ಪೂರೈಸಿದ್ದರು. ಇದರೊಂದಿಗೆ ಮಹಿಳಾ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗದ ದ್ವಿಶತಕ ಸಿಡಿಸಿದ ದಾಖಲೆ ಕೂಡ ಶಫಾಲಿ ವರ್ಮಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ (248 ಎಸೆತಗಳು) ಹೆಸರಿನಲ್ಲಿತ್ತು.
ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ದ್ವಿಶತಕ ಸಿಡಿಸಿದ ಎರಡನೇ ಆಟಗಾರ್ತಿ ಎಂಬ ದಾಖಲೆಯನ್ನು ಕೂಡ ಶಫಾಲಿ ವರ್ಮಾ ಮಾಡಿದ್ದಾರೆ. ಇದಕ್ಕೂ ಮುನ್ನ 2002 ರಲ್ಲಿ ಮಿಥಾಲಿ ರಾಜ್ (214) ಇಂಗ್ಲೆಂಡ್ ವಿರುದ್ಧ ದ್ವಿಶತಕ ಬಾರಿಸಿದ್ದರು. ಸದ್ಯ 205 ರನ್ಗಳೊಂದಿಗೆ ಶಫಾಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
ಮಹಿಳಾ ಟೆಸ್ಟ್ ಪಂದ್ಯವೊಂದರ ಇನಿಂಗ್ಸ್ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ವಿಶ್ವ ದಾಖಲೆ ಶಫಾಲಿ ಪಾಲಾಗಿದೆ. ಈ ಪಂದ್ಯದಲ್ಲಿ ಶಫಾಲಿ ವರ್ಮಾ 8 ಸಿಕ್ಸ್ ಬಾರಿಸುವುದರ ಮೂಲಕ ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ ದಾಖಲೆ ಮುರಿದಿದ್ದಾರೆ. ಆದರೆ, ಹಿಂದಿನ ದಾಖಲೆ ಹಾಗೂ ಈ ದಾಖಲೆಯ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಹೀಲಿ ಕೇವಲ 2 ಸಿಕ್ಸ್ ಬಾರಿಸಿ ದಾಖಲೆ ಬರೆದಿದ್ದರು. ಆದರೆ, ಶಫಾಲಿ ಬರೋಬ್ಬರಿ 8 ಸಿಕ್ಸರ್ ಸಿಡಿಸಿದ್ದಾರೆ.

ಇನ್ನು ಮಹಿಳಾ ಟೆಸ್ಟ್ ಪಂದ್ಯದಲ್ಲಿ ಮೊದಲ ವಿಕೆಟ್ ಗೆ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಕೂಡ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಪಾಲಾಗಿದೆ. ಟೀಮ್ ಇಂಡಿಯಾದ ಆರಂಭಿಕ ಜೋಡಿ 292 ರನ್ ಗಳನ ಜೊತೆಯಾಟವಾಡಿ ಈ ದಾಖಲೆ ಬರೆದಿದೆ. ಇದಕ್ಕೂ ಮುನ್ನ ಪಾಕ್ ತಂಡದ ಆರಂಭಿಕ ಜೋಡಿ ಕಿರಣ್ ಬಲೂಚ್ ಮತ್ತು ಸಜ್ಜಿದಾ ಶಾ 241 ರನ್ ಗಳ ಜೊತೆಯಾಟವಾಡಿದ್ದು ದಾಖಲೆಯಾಗಿತ್ತು.
ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳ ಜೊತೆಯಾಟವಾಡಿದ ದಾಖಲೆಯನ್ನು ಶಫಾಲಿ-ಸ್ಮೃತಿ ಜೋಡಿ ತಮ್ಮದಾಗಿಸಿಕೊಂಡಿಸಿದ್ದಾರೆ. ಹಿಂದೆ ತಿರುಶ್ ಕಾಮಿನಿ ಮತ್ತು ಪುನಮ್ ರಾವುತ್ 275 ರನ್ಗಳ ಜೊತೆಯಾಟವಾಡಿ ದಾಖಲೆ ಬರೆದಿದ್ದರು. ಈಗ ಭಾರತೀಯ ಆಟಗಾರ್ತಿಯರು 292 ರನ್ ಗಳ ಜೊತೆಯಾಟವಾಡಿ ಇತಿಹಾಸ ನಿರ್ಮಿಸಿದ್ದಾರೆ.