ಬೆಂಗಳೂರು: ದೂರು ನೀಡಲು ಬಂದಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಡಿವೈಎಸ್‌ಪಿ ಎ ರಾಮಚಂದ್ರಪ್ಪ(A Ramachandrappa) ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಕೊರಟಗೆರೆ ತಾಲ್ಲೂಕಿನ ಮಹಿಳೆಯೊಬ್ಬರು ಈ ಲೈಂಗಿಕ ದೌರ್ಜನ್ಯದ (Sexual assault) ಕೇಸ್ ದಾಖಲಿಸಿದ್ದಾರೆ. ಈಗಾಗಲೇ ಕಚೇರಿಯಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಬಂಧಿತರಾಗಿದ್ದ ಡಿವೈಎಸ್ಪಿ ಎ. ರಾಮಚಂದ್ರಪ್ಪ ಅವರನ್ನು ಜೆಎಂಎಫ್‌ಸಿ ನ್ಯಾಯಾಲಯ ಜ. 4ರಂದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ನಿವೇಶನ ನೀಡುವುದಾಗಿ ಹೇಳಿ ತನ್ನಿಂದ 12 ಲಕ್ಷ ರೂ. ಹಣ ಪಡೆದ ಪ್ರಭಾವಿ ವ್ಯಕ್ತಿಯೊಬ್ಬ ನಿವೇಶನ ನೀಡದೆ, ಹಣ ಹಿಂತಿರುಗಿಸದೆ ವಂಚಿಸಿದ್ದಾನೆ. ಹೀಗಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಮಹಿಳೆಯು ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಿದ್ದರು. ಈ ಕುರಿತು ಮಹಿಳಾ ಆಯೋಗವು ತುಮಕೂರು ಜಿಲ್ಲಾ ಪೊಲೀಸ್ ಕಚೇರಿಗೆ ಪತ್ರ ಬರೆದಿತ್ತು.
ರಾಜ್ಯ ಮಹಿಳಾ ಆಯೋಗದ ಶಿಫಾರಸಿನ ಮೇರೆಗೆ ತಾನು ಸಲ್ಲಿಸಿದ್ದ ವಂಚನೆ ಪ್ರಕರಣದ ವಿಚಾರಣೆ ನೆಪದಲ್ಲಿ ತನ್ನನ್ನು ಠಾಣೆಗೆ ಕರೆಸಿಕೊಂಡ ರಾಮಚಂದ್ರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ.
ಒಂದಲ್ಲ ಒಂದು ಕಾರಣಕ್ಕೆ ರಾಮಚಂದ್ರಪ್ಪ ತನ್ನನ್ನು ಠಾಣೆಗೆ ಕರೆಸುತ್ತಿದ್ದರು. ನಾನು ಪೊಲೀಸ್ (police)ಠಾಣೆಗೆ ಭೇಟಿ ನೀಡಿದಾಗ, ನನ್ನ ಪತಿಯನ್ನು ಹೊರಗೆ ಕಾಯುವಂತೆ ಹೇಳಿ ರಾಮಚಂದ್ರಪ್ಪ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಹೀಗಾಗಿ ರಾಮಚಂದ್ರಪ್ಪಗೆ ಮತ್ತೆ ಸಂಕಷ್ಟು ಶುರುವಾಗಿದೆ.