ಬೆಂಗಳೂರು: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೇವಣ್ಣಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಹೊಳೆನರಸೀಪುರ (Holenarasipur) ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಗೆ ಹೈಕೋರ್ಟ್ (High Court)ನಿಂದ ಮಧ್ಯಂತರ ರಿಲೀಫ್ ಸಿಕ್ಕಿದೆ. ಪ್ರಕರಣ ರದ್ದು ಕೋರಿದ್ದ ಹೆಚ್.ಡಿ.ರೇವಣ್ಣ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸೆಪ್ಟೆಂಬರ್ 19ರವರೆಗೆ ಯಾವುದೇ ಪ್ರಕ್ರಿಯೆ ನಡೆಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.
ಹೆಚ್.ಡಿ. ರೇವಣ್ಣ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ನಾಲ್ಕು ವರ್ಷಗಳ ಹಿಂದಿನ ದೂರಿಗೆ ಈಗ ಎಫ್ ಐಆರ್ ದಾಖಲಿಸಲಾಗಿದೆ. ಐಪಿಸಿ 506, 509 ಸೆಕ್ಷನ್ ದೂರಿನಲ್ಲಿರುವ ಅಂಶಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಎಫ್ ಐಆರ್ ರದ್ದು ಮಾಡಬೇಕೆಂದು ಮನವಿ ಮಾಡಿದ್ದರು.
ಹೆಚ್.ಡಿ ರೇವಣ್ಣ ಅವರ ವಿರುದ್ಧ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮನೆಯ ಕೆಲಸದ ಮಹಿಳೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ಸಲ್ಲಿಸಿದ್ದರು. ಕಿಡ್ನಾಪ್ ಕೇಸ್ನಲ್ಲಿ ಹೆಚ್ಡಿ ರೇವಣ್ಣ ಅವರಿಗೆ ಜಾಮೀನು ಮಂಜೂರಾಗಿದೆ. ಈ ಪ್ರಕರಣ ರದ್ದು ಕೋರಿ ರೇವಣ್ಣ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿದೆ. ಅಲ್ಲಿಯವರೆಗೂ ರೇವಣ್ಣ ಅವರನ್ನು ವಿಚಾರಣೆ ನಡೆಸದಂತೆ ಸೂಚಿಸಿದೆ.