ನೇಪಾಳ, ಚೀನಾ, ಭಾರತ ಸೇರಿದಂತೆ ಹಲವೆಡೆ ಮಂಗಳವಾರ ಭೂಕಂಪನದ ಅನುಭವವಾಗಿದೆ.
ಈ ಪೈಕಿ ಚೀನಾದಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದ್ದು, 30ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಟಿಬೆಟ್ ನಲ್ಲಿ ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆಯ ಭೂಕಂಪನದ ಅನುಭವವಾಗಿದೆ. ಟಿಬೆಟ್ ನ ಶಿಗಾಟ್ಸೆ ನಗರದಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಡೀ ಪ್ರದೇಶ ಭಯಭೀತವಾಗಿದೆ.
ಭೂಕಂಪನದಿಂದ ಭಾರತ, ನೇಪಾಳ ಮತ್ತು ಭೂತಾನ್ ನ ಹಲವು ಪ್ರದೇಶಗಳಲ್ಲಿ ಕಟ್ಟಡಗಳು ನಲುಗಿರುವ ಅನುಭವವಾಗಿದೆ. ಅಲ್ಲದೇ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಹಲವು ಮಾಧ್ಯಮಗಳು ಹಲವು ರೀತಿಯಲ್ಲಿ ಸಾವಿನ ಸಂಖ್ಯೆ ಘೋಷಿಸಿವೆ.
ಭೂಕಂಪನದ ಕೇಂದ್ರ ಬಿಂದುವಿನ ಬಳಿ ಹಲವಾರು ಕಟ್ಟಡಗಳು ಕುಸಿದಿವೆ. ದೆಹಲಿ-ಎನ್ ಸಿಆರ್ ಮತ್ತು ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮತ್ತು ರಾಜ್ಯದ ಉತ್ತರ ಭಾಗದ ಅನೇಕ ಸ್ಥಳಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ, ಬಲವಾದ ಕಂಪನದ ಅನುಭವವಾಗಿದ್ದು, 7.1 ತೀವ್ರತೆಯ ಭೂಕಂಪವು ನೇಪಾಳ-ಟಿಬೆಟ್ ಗಡಿಯ ಸಮೀಪವಿರುವ ಕ್ಸಿಜಾಂಗ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕಠ್ಮಂಡು ಮತ್ತು ಮೌಂಟ್ ಎವರೆಸ್ಟ್ ಬಳಿಯ ಪ್ರದೇಶಗಳು ಸೇರಿದಂತೆ ನೇಪಾಳದ ನೆರೆಯ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ.