ಕರ್ನಾಟಕ ಇರುವುದೇ ಹಾಗೆ. ಕರುನಾಡು ಎಂದಿಗೂ ಸರ್ವ ಜನಾಂಗದ ಶಾಂತಿಯ ತೋಟ. ಹಿಂದು, ಮುಸಲ್ಮಾನರು ಸೇರಿ ಎಲ್ಲಾ ಧರ್ಮೀಯರು, ಜಾತಿ, ಸಮುದಾಯಗಳ ಜನ ಸೌಹಾರ್ದಯುತವಾಗಿ ಜೀವನ ನಡೆಸುವ ಬೀಡಿದು. ಇದಕ್ಕೆ ನಿದರ್ಶನ ಎಂಬಂತೆ, ರಾಯಚೂರು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದವರೊಬ್ಬರ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಪ್ರಸಾದ ಸೇವೆ ನಡೆದಿದೆ. ಆ ಮೂಲಕ ನಾಡು ಸೌಹಾರ್ದತೆಯ ತವರೂರು ಎಂಬುದದಕ್ಕೆ ತುಷ್ಟಿ ನೀಡಿದೆ….
ಜಾತಿ, ಧರ್ಮದ ಶ್ರೇಷ್ಠತೆಯ ವ್ಯಸನದಲ್ಲೇ ಮೈಮರೆತವರಿಗೆ ಕರೀಂ ಸಾಬ್ ಅವರು ಸೌಹಾರ್ದತೆಯ ಸಂದೇಶ ರವಾನಿಸಿದ್ದಾರೆ. ರಾಯಚೂರು ಜಿಲ್ಲೆ ಕವಿತಾಳ ಪಟ್ಟಣದಲ್ಲಿ ನೆಲೆಸಿರುವ ಕರೀಂ ಸಾಬ್ ಅವರ ಮನೆಗೆ ಅಯ್ಯಪ್ಪ ಸ್ವಾಮಿ ಭಕ್ತರು ಪೂಜೆ ಮುಗಿಸಿ ಬಂದಿದ್ದರು. ಈ ವೇಳೆ ಕರೀಂ ಸಾಬ್ ಅವರು ಮಾಲಾಧಾರಿಗಳಿಗೆ ಪ್ರw`ಸಾದದ ವ್ಯವಸ್ಥೆ ಮಾಡಿಸಿದ್ದಲ್ಲದೆ, ಖುದ್ದು ತಾವೇ ಬಡಿಸಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
ಅಂದು ಕರೀಂ ಸಾಬ್ ಅವರ ಮನೆಯಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಮಾಲಾಧಾರಿಗಳಿಗೆ ಹೋಳಿಗೆ, ಲಡ್ಡು, ಚಪಾತಿ, ಪಲ್ಯ, ಅನ್ನ-ಸಾಂಬಾರ್ ಸೇರಿ ಹತ್ತಾರು ಬಗೆಯ ತಿನಿಸುಗಳನ್ನು ಮಾಡಲಾಗಿತ್ತು. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳೂ ಅಷ್ಟೇ, ಯಾವುದೇ ಭೇದ ಮಾಡದೆ, ಖುಷಿಯಾಗಿ ಪ್ರಸಾದ ಸೇವಿಸಿ, ಅಯ್ಯಪ್ಪ ಸ್ವಾಮಿಯು ನಿಮಗೆ ಒಳ್ಳೆಯದು ಮಾಡಲಿ ಎಂದು ಹರಸಿ ಹೋಗಿದ್ದಾರೆ. ಕರೀಂ ಸಾಬ್ ಅವರ ಸೌಹಾರ್ದತೆಗೆ ಇಡೀ ರಾಜ್ಯವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ಉತ್ತರ ಕರ್ನಾಟಕದಲ್ಲಿ ಶತಮಾನಗಳಿಂದಲೂ ಧಾರ್ಮಿಕ ಸೌಹಾರ್ದತೆ ಮೇಳೈಸಿದೆ. ಅದರಲ್ಲೂ, ಹಿಂದು-ಮುಸ್ಲಿಮರು ಒಂದಾಗಿ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಪ್ರತಿ ವರ್ಷವೂ ಆಚರಿಸುತ್ತಾರೆ. ಅಷ್ಟೇ ಏಕೆ, ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಮುಸ್ಲಿಮರಿಗೆ ಹಿಂದಿ, ಉರ್ದು ಭಾಷೆಗಳು ಕೂಡ ಮಾತನಾಡಲು ಬರುವುದಿಲ್ಲ. ಹಿಂದುಗಳೂ ಅಷ್ಟೇ, ಮುಸ್ಲಿಮರನ್ನು ಸಹೋದರರಂತೆ ಕಂಡು, ಪ್ರತಿಯೊಂದು ಆಚರಣೆಗಳನ್ನು ಒಟ್ಟಾಗಿ ಆಚರಿಸುತ್ತಾರೆ. ಈಗ ಕರೀಂ ಸಾಬ್ ಅವರಂತಹವರು ಹಿಂದುಗಳಿಗೆ ಪ್ರಸಾದದ ವ್ಯವಸ್ಥೆ ಮಾಡಿರುವುದು ಕೂಡ ಇಂತಹ ಬಾಂಧವ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ರಾಜ್ಯದಲ್ಲಿ ಕರೀಂ ಸಾಬ್ ಅವರಂತಹವರ ಸಂತತಿ ಸಾವಿರವಾಗಲಿ. ಬಾಂಧವ್ಯತೆ ಗಟ್ಟಿಗೊಳ್ಳಲಿ…ಸಹಿಷ್ಣುತೆ ಮನೆ ಮಾಡಲಿ ಎಂಬುವುದು ಕರ್ನಾಟಕ ನ್ಯೂಸ್ ಬೀಟ್ ಆಶಯ….