ನವದೆಹಲಿ, ಜನವರಿ 22: 18 ವರ್ಷಗಳ ಕಾಯುವಿಕೆಯ ನಂತರ 2025ರಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಲೀಕತ್ವ ಬದಲಾಗುವ ಸಾಧ್ಯತೆ ದಟ್ಟವಾಗಿದೆ. ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲಾ ಅವರು ತಂಡವನ್ನು ಖರೀದಿಸಲು ಆಸಕ್ತಿ ತೋರಿಸಿ, ತಮ್ಮ ಎಕ್ಸ್ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
ಪುರುಷರ ಮತ್ತು ಮಹಿಳಾ ಎರಡೂ ವಿಭಾಗಗಳಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ, ಆರ್‌ಸಿಬಿಯ ಬ್ರ್ಯಾಂಡ್ ಮೌಲ್ಯ ಮತ್ತು ಅಭಿಮಾನಿಗಳ ಸಂಖ್ಯೆ ಗಗನಕ್ಕೇರಿವೆ. ಈ ಅವಕಾಶವನ್ನು ಬಂಡವಾಳವಾಗಿಸಿಕೊಂಡು ಪ್ರಸ್ತುತ ಮಾಲೀಕರಾದ ಡಿಯಾಜಿಯೊ (ಯುನೈಟೆಡ್ ಸ್ಪಿರಿಟ್ಸ್) ಸಂಸ್ಥೆಯು ತಂಡವನ್ನು ಮಾರಾಟಕ್ಕಿಟ್ಟಿದ್ದು, 2026ರ ಮಾರ್ಚ್ 31ರೊಳಗೆ ಡೀಲ್ ಫೈನಲೈಸ್ ಮಾಡುವ ಗುರಿ ಹೊಂದಿದೆ.
ಪೂನವಾಲಾ ಎಕ್ಸ್‌ನಲ್ಲಿ ಬಿಡ್ ಘೋಷಣೆ
“ಮುಂದಿನ ಕೆಲವು ತಿಂಗಳುಗಳಲ್ಲಿ ಐಪಿಎಲ್‌ನ ಅತ್ಯುತ್ತಮ ತಂಡಗಳಲ್ಲಿ ಒಂದಾದ ಆರ್‌ಸಿಬಿಗಾಗಿ ಬಲವಾದ ಮತ್ತು ಸ್ಪರ್ಧಾತ್ಮಕ ಬಿಡ್ ಮಾಡಲಾಗುವುದು,” ಎಂದು ಆದರ್ ಪೂನವಾಲಾ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಮಾರಾಟದ ಊಹಾಪೋಹಗಳು ಹಬ್ಬಿದ ನಂತರ ತಂಡ ಖರೀದಿಗೆ ಬಹಿರಂಗವಾಗಿ ಮುಂದೆ ಬಂದ ಮೊದಲ ಪ್ರಮುಖ ಉದ್ಯಮಿ ಇವರೇ.
ಆರ್‌ಸಿಬಿ ಮಾರಾಟಕ್ಕೆ ಸಜ್ಜು
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ನೀಡಿದ ಮಾಹಿತಿಯಲ್ಲಿ ಡಿಯಾಜಿಯೊ ಸಂಸ್ಥೆ, ಇದನ್ನು “ಹೂಡಿಕೆಯ ಕಾರ್ಯತಂತ್ರದ ವಿಮರ್ಶೆ” ಎಂದು ಕರೆದಿದೆ. ಆರ್‌ಸಿಬಿ ಮಾಲೀಕತ್ವ ಹೊಂದಿರುವ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (RC SPL) ಸಂಸ್ಥೆಯ ಮೂಲಕ ಈ ಪ್ರಕ್ರಿಯೆ ನಡೆಯುತ್ತಿದೆ.
ಆದರ್ ಪೂನವಾಲಾ ಯಾರು?
ಕೋವಿಡ್-19 ಸಾಂಕ್ರಾಮಿಕದಲ್ಲಿ ಜಾಗತಿಕ ಲಸಿಕೆ ಸರಬರಾಜಿನಲ್ಲಿ ಮುಖ್ಯ ಪಾತ್ರ ವಹಿಸಿ ಜನಪ್ರಿಯಗೊಂಡ ಆದರ್ ಪೂನವಾಲಾ, ಭಾರತೀಯ ಬಿಲಿಯನೇರ್ ಉದ್ಯಮಿ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಜೊತೆಗೆ ಪೂನವಾಲಾ ಫಿನ್‌ಕಾರ್ಪ್‌ನ ಅಧ್ಯಕ್ಷರಾಗಿರುವ ಅವರು, ಹಣಕಾಸು, ರಿಯಲ್ ಎಸ್ಟೇಟ್ ಮತ್ತು ಮನರಂಜನಾ ಕ್ಷೇತ್ರಗಳಲ್ಲೂ ತಮ್ಮ ವ್ಯಾಪಾರವನ್ನು ವಿಸ್ತರಿಸಿದ್ದಾರೆ.
ಐಪಿಎಲ್‌ನ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆರ್‌ಸಿಬಿ, ಪೂನವಾಲಾ ಅವರಂತಹ ಶಕ್ತಿಮಾನ ಉದ್ಯಮಿಯ ಕೈ ಸೇರಿದರೆ ಹೊಸ ಯುಗದ ಆರಂಭವಾಗಬಹುದು. ಈ ಬಿಡ್ಡಿಂಗ್ ರೇಸ್ ಇಡೀ ಕ್ರಿಕೆಟ್ ಅಭಿಮಾನಿಗಳಲ್ಲಿ ಊಹಾಪೋಹಗಳನ್ನು ಹುಟ್ಟಿಸಿದೆ.
ಇದನ್ನೂ ಓದಿ : ಸೆಲ್ಫಿಗಾಗಿ ಅಲ್ಲ, ಮಗಳ ಪ್ರಾಣ ಉಳಿಸಲು ರೋಹಿತ್ ಶರ್ಮಾ ಕೈ ಹಿಡಿದ ತಾಯಿ



















