ಮಂಡ್ಯ: ಮೂರು ಕೆಎಸ್‌ಆರ್‌ಟಿಸಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಗ್ರಾಮದ ಬಳಿಯ ಮಳವಳ್ಳಿ-ಕೊಳ್ಳೇಗಾಲ ಹೆದ್ದಾರಿಯಲ್ಲಿ ನಡೆದಿದೆ.
ಇಂದು (ಭಾನುವಾರ) ನಡೆದ ಈ ಭೀಕರ ಅಪಘಾತದಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಮಳವಳ್ಳಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.
ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾಗಿವೆ. ಈ ಘರ್ಷಣೆಯಿಂದಾಗಿ ಮತ್ತೊಂದು ಬಸ್‌ಗೂ ಡಿಕ್ಕಿಯಾಗಿದ್ದರಿಂದ ಮೂರು ಬಸ್‌ಗಳ ಪ್ರಯಾಣಿಕರು ಗಾಯಗೊಂಡಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಮೂರು ಬಸ್‌ಗಳ ಕೆಲವು ಭಾಗಗಳು ಜಖಂಗೊಂಡಿವೆ.
ಸದ್ಯ ಸ್ಥಳಕ್ಕೆ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಘಟನೆಯ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ವೇಗವಾಗಿ ವಾಹನ ಚಲಾಯಿಸಿದ್ದು ಅಥವಾ ರಸ್ತೆಯ ಸ್ಥಿತಿಗತಿ ಕಾರಣವಿರಬಹುದು ಎನ್ನಲಾಗಿದೆ. ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು ಎಂದು ತಿಳಿದು ಬಂದಿದೆ.