ಬಂಟ್ವಾಳ : ಯಕ್ಷಗಾನ ರಂಗದ ಹಿರಿಯ ಅರ್ಥಧಾರಿ ವಿಟ್ಲ ಶಂಭು ಶರ್ಮ (74) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದ ಬಳಿಕ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ.
ಪತ್ನಿ ಹಾಗೂ ಪುತ್ರನ ಸಹಿತ ಅಪಾರ ಬಂಧು, ಬಾಂಧವರು, ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಉಪನ್ಯಾಸಕರಾಗಿ, ಯಕ್ಷಗಾನ ಅರ್ಥಧಾರಿಯಾಗಿ ಜನಪ್ರಿಯರಾಗಿದ್ದ ಅವರು, ಪ್ರಸ್ತುತ ಪುತ್ತೂರು ಸಮೀಪ ಮುರ ಎಂಬಲ್ಲಿ ವಾಸಿಸುತ್ತಿದ್ದರು.

ಶೇಣಿ ಗೋಪಾಲಕೃಷ್ಣ ಭಟ್ ಸಹಿತ ಖ್ಯಾತನಾಮರೊಂದಿಗೆ ಅರ್ಥಗಾರಿಕೆ ಮಾಡಿದ ಅನುಭವಿಯಾಗಿದ್ದ ಶಂಭು ಶರ್ಮ, ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದರು.
ಖಳಪಾತ್ರ ಸಹಿತ ಯಾವುದೇ ಪಾತ್ರ ವಹಿಸಿದರೂ ಶಂಭು ಶರ್ಮ ಅವರ ಆರ್ಥಗಾರಿಕೆಗೆ ಅಪಾರ ಅಭಿಮಾನಿಗಳಿದ್ದರು. ಕ್ಯಾಸೆಟ್ ಸಹಿತ ಈಗಿನ ನವ ಮಾಧ್ಯಮಗಳಲ್ಲೂ ಶಂಭು ಶರ್ಮ ಅವರ ಪಾತ್ರಗಳನ್ನು ವೀಕ್ಷಿಸುವವರು, ಕೇಳುವ ಅಭಿಮಾನಿಗಳು ಹಲವರಿದ್ದರು. ಇದೀಗ ಅವರ ಅಗಲಿಕೆಯ ಸುದ್ದಿ ಕೇಳಿ ಅಪಾರ ಅಭಿಮಾನಿಗಳಿಗೆ ಬೇಸರ ತರಿಸಿದ್ದು, ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ : ಪ್ರೊ ಕಬಡ್ಡಿ ಲೀಗ್-12: ತವರಿನಲ್ಲಿ ದಬಂಗ್ ದರ್ಬಾರ್ ; ಪುಣೇರಿ ಪಲ್ಟನ್‌ಗೆ ನಿರಾಸೆ, ಡೆಲ್ಲಿ ಚಾಂಪಿಯನ್!



















