ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚಾಗಿರುವ ಕಸದ ಸಮಸ್ಯೆ ನಿವಾರಣೆಗೆ ಮುಂದಾಗಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML) ಕಠಿಣ ಕ್ರಮ ಕೈಗೊಂಡಿದೆ. ಕಸ ಸುರಿಯುವ ಹಬ್ಬ ಎನ್ನುವ ವಿಶಿಷ್ಟ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಅದರ ಮೂಲಕ ಎಲ್ಲೆಂದರಲ್ಲಿ ಕಸ ಎಸೆಯುವವರ ಮನೆಗಳ ಮುಂದೆ ಕಸ ಸುರಿದು, ದಂಡ ವಿಧಿಸುತ್ತಿದೆ.
ಇದೀಗ ಈ ಅಭಿಯಾನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ದೃಶ್ಯವನ್ನು ಚಿತ್ರೀಕರಿಸಿ ಕಳುಹಿಸಿ ಕೊಟ್ಟವರಿಗೆ 250 ರೂ. ನೀಡುವುದಾಗಿ BSWML ಘೋಷಿಸಿದೆ. ಇಂತಹ ದೃಶ್ಯವನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವ್ಯಾಟ್ಸ್‌ಆ್ಯಪ್ ಸಂಖ್ಯೆ-9448197197ಕ್ಕೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಈ ಯೋಜನೆಯಿಂದಾಗಿ GBA ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತದೆ ಎಂಬ ಅಭಿಪ್ರಾಯ ಕೇಳಿಬರುತ್ತಿದ್ದರೂ GBA ನಷ್ಟ ಅನುಭವಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಕೆಂದರೆ ಬಹುಮಾನವನ್ನು ಕಸ ಹಾಕುವವರಿಂದ ಸಂಗ್ರಹಿಸಲಾದ ದಂಡದಿಂದ ಪಾವತಿಸಲಾಗುತ್ತದೆ. ಇಲಾಖೆ ಬೇಜವಾಬ್ದಾರಿಯುತ ಸಾರ್ವಜನಿಕರು ಎಸೆಯುವ ತ್ಯಾಜ್ಯದ ಪ್ರಮಾಣ ಮತ್ತು ಪ್ರಕಾರವನ್ನು ಅವಲಂಬಿಸಿ 1,000 ರಿಂದ 10,000 ರೂ.ಗಳನ್ನು ಸಂಗ್ರಹಿಸುತ್ತಿದ್ದು, 250 ರೂ.ಗಳನ್ನು ಬಹುಮಾನವಾಗಿ ನೀಡುವುದು ನಷ್ಟವಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ : ವಿಶ್ವಕಪ್ ಗೆದ್ದರೂ ಭಾರತಕ್ಕೆ ಸಿಕ್ಕಿದ್ದು ನಕಲಿ ಟ್ರೋಫಿಯೇ? ಇದರ ಹಿಂದಿನ ಅಸಲಿ ಸತ್ಯ ಇಲ್ಲಿದೆ!



















