ಬೆಂಗಳೂರು: ಸರ್ಕಾರಿ ಸಂಸ್ಥೆಗಳಿಂದ ಮಾತ್ರ ಪ್ರಮಾಣೀಕೃತ, ಲೇಬಲ್ ಇರುವ ಬಿತ್ತನೆ ಬೀಜಗಳನ್ನು ಖರೀದಿಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಹೀಗಾಗಿ ಸರ್ಕಾರದ ಆದೇಶ ಪ್ರಶ್ನಿಸಿ ಮೆಸರ್ಸ್ ರಾಜ್ಯ ಪ್ರಮಾಣೀಕೃತ ಬೀಜ ಉತ್ಪಾದಕರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಕೆ.ವಿ. ಅರವಿಂದ್ ಅವರಿದ್ದ ಏಕ ಸದಸ್ಯ ಪೀಠ ವಜಾ ಮಾಡಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು, ರೈತರಿಗೆ ಗುಣಮಟ್ಟದ ಬೀಜಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ ಆದೇಶ ಹೊರಡಿಸಲಾಗಿದೆ. ಆ ಆದೇಶ ಸರಿಯಾಗಿಯೇ ಇದೆ. ಇದರಲ್ಲಿ ಮಧ್ಯಪ್ರವೇಶ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಆದೇಶ ಹೊರಡಿಸಲು ಸರ್ಕಾರಿ ತನ್ನ ಉದ್ದೇಶ ಮತ್ತು ಕಾರಣವನ್ನು ನೀಡಿದ್ದು, ಅದರಲ್ಲಿ ಗುಣಾತ್ಮಕ ಮತ್ತು ಪ್ರಮಾಣೀಕೃತ ಬೀಜಗಳು ಸಕಾಲದಲ್ಲಿ ರೈತರಿಗೆ ಪೂರೈಕೆಯಾಗಬೇಕೆಂಬ ಉದ್ಧೇಶ ಹೊಂದಲಾಗಿದೆ. ಹೀಗಿಗ ಸರ್ಕಾರದ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೋರ್ಟ್ ಹೇಳಿದೆ.
ರಾಜ್ಯದಲ್ಲಿ ಒಟ್ಟು 15.73 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಅಗತ್ಯವಿದೆ. ಸರ್ಕಾರಿ ಸಂಸ್ಥೆಗಳು 6.93 ಲಕ್ಷ ಕ್ವಿಂಟಾಲ್ ಬೀಜವನ್ನು ಪೂರೈಸುತ್ತಿವೆ. ಉಳಿದ 8.08 ಲಕ್ಷ ಕ್ವಿಂಟಾಲ್ ಬೀಜವನ್ನು ಖಾಸಗಿ ಸಂಸ್ಥೆಗಳು ಪೂರೈಸುತ್ತಿವೆ. ಬಿತ್ತನೆ ಬೀಜದ ಬೆಲೆ ನಿಯಂತ್ರಣ ಉದ್ದೇಶದಿಂದ ಈ ಆದೇಶವನ್ನು ಸರ್ಕಾರ ಹೊರಡಿಸಿದೆ.