ಢಾಕಾ/ನವದೆಹಲಿ : ಭದ್ರತಾ ಕಾರಣಗಳನ್ನು ಮುಂದಿಟ್ಟು ಬಾಂಗ್ಲಾದೇಶ ಕ್ರಿಕೆಟ್ ತಂಡವು ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿದಿರುವ ಅಚ್ಚರಿಯ ಬೆಳವಣಿಗೆ ನಡೆದಿದೆ. ಭಾರತದಲ್ಲಿ ತಮ್ಮ ಪಂದ್ಯಗಳನ್ನು ಆಡಲು ಹಿಂದೇಟು ಹಾಕಿದ್ದ ಬಾಂಗ್ಲಾದೇಶ, ತನ್ನ ವೇಳಾಪಟ್ಟಿಯನ್ನು ಭಾರತದಿಂದ ಹೊರಗೆ ಸ್ಥಳಾಂತರಿಸದಿದ್ದರೆ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ಅಂತಿಮವಾಗಿ ತಂಡ ಟೂರ್ನಿಯಿಂದಲೇ ಹೊರಬಿದ್ದಿದೆ.
ಬಾಂಗ್ಲಾದೇಶ ಸರ್ಕಾರದ ಸಲಹೆಗಾರ ಆಸಿಫ್ ನಜ್ರುಲ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ಭದ್ರತಾ ಕಾಳಜಿಯಿಂದಾಗಿ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮ ಪಂದ್ಯಗಳನ್ನು ಭಾರತದ ಹೊರಗೆ ನಡೆಸಲು ಕೋರಿದ್ದೆವು,” ಎಂದು ತಿಳಿಸಿದ್ದಾರೆ.
ಕೆಕೆಆರ್, ಮುಸ್ತಾಫಿಜುರ್ ವಿವಾದದ ಕಿಡಿ
ಬಾಂಗ್ಲಾದೇಶದ ಈ ಕಠಿಣ ನಿರ್ಧಾರದ ಹಿಂದೆ ಐಪಿಎಲ್ ಹರಾಜಿನ ವಿವಾದವೂ ಪ್ರಮುಖ ಪಾತ್ರ ವಹಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬರೋಬ್ಬರಿ 9.20 ಕೋಟಿ ರೂ.ಗಳಿಗೆ ಖರೀದಿಸಿತ್ತು. ಆದರೆ, ಬಿಸಿಸಿಐ ನಿರ್ದೇಶನದ ಮೇರೆಗೆ ಕೆಕೆಆರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗಿದ್ದ ಬಾಂಗ್ಲಾ ಆಟಗಾರನಿಗೆ ಆದ ಈ ಅವಮಾನ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮತ್ತು ಭಾರತದ ನಡುವಿನ ಸಂಬಂಧ ಹಳಸಲು ಕಾರಣವಾಯಿತು.
ಪಾಕಿಸ್ತಾನದ ನಿಲುವು ಮತ್ತು ಸಂಧಾನ
ಬಾಂಗ್ಲಾದೇಶಕ್ಕೆ ಬೆಂಬಲ ವ್ಯಕ್ತಪಡಿಸಿ ಪಾಕಿಸ್ತಾನ ಕೂಡ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಮುಂದಾಗಿತ್ತು. ಆದರೆ, ಐಸಿಸಿ ಮತ್ತು ಬಿಸಿಬಿ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳ ನಂತರ ಪಾಕಿಸ್ತಾನ ತನ್ನ ನಿಲುವು ಬದಲಿಸಿತು. ಕ್ರಿಕೆಟ್‌ನ ಹಿತದೃಷ್ಟಿಯಿಂದ ಭಾರತದ ವಿರುದ್ಧ ಆಡಲು ಒಪ್ಪಿಕೊಂಡಿತು. ಬಾಂಗ್ಲಾದೇಶದ ಅಮಿನುಲ್ ಅವರು ಲಾಹೋರ್‌ಗೆ ತೆರಳಿ ಪಿಸಿಬಿ ಮುಖ್ಯಸ್ಥ ನಖ್ವಿ ಮತ್ತು ಐಸಿಸಿ ಉಪಾಧ್ಯಕ್ಷ ಇಮ್ರಾನ್ ಖ್ವಾಜಾ ಅವರೊಂದಿಗೆ ಚರ್ಚಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬಾಂಗ್ಲಾ ಬದಲು ಸ್ಕಾಟ್ಲೆಂಡ್
ಬಾಂಗ್ಲಾದೇಶ ಟೂರ್ನಿಯಿಂದ ಹಿಂದೆ ಸರಿದ ಕಾರಣ, ಅವರ ಬದಲಿಗೆ ಸ್ಕಾಟ್ಲೆಂಡ್ ತಂಡಕ್ಕೆ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಲಭಿಸಿದೆ. ವೇಳಾಪಟ್ಟಿಯ ಪ್ರಕಾರ ಬಾಂಗ್ಲಾದೇಶವು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮೊದಲ ಮೂರು ಪಂದ್ಯಗಳನ್ನು ಮತ್ತು ನಂತರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಡಬೇಕಿತ್ತು. ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ಟಿ20 ವಿಶ್ವಕಪ್‌ನಿಂದ ಹೊರಗುಳಿದಂತಾಗಿದೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಮಹಾಶಿವರಾತ್ರಿ ಸಂಭ್ರಮ | ಕಪಿಲೇಶ್ವರ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ



















