ನವದೆಹಲಿ: ಭಾರತ ಕ್ರಿಕೆಟ್‌ನ ‘ಗಬ್ಬರ್’ ಎಂದೇ ಖ್ಯಾತರಾಗಿದ್ದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ನಂತರ ತಮ್ಮ ಆತ್ಮಚರಿತ್ರೆಯ ಮೂಲಕ ಹಲವು ಆಸಕ್ತಿದಾಯಕ ಮತ್ತು ವೈಯಕ್ತಿಕ ಸಂಗತಿಗಳನ್ನು ಹೊರಹಾಕಿದ್ದಾರೆ. ಇತ್ತೀಚೆಗೆ ಅವರು ಬಹಿರಂಗಪಡಿಸಿದ ಒಂದು ಪ್ರಸಂಗವು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ – ಅದು ಭಾರತ ‘ಎ’ ತಂಡದ ಪ್ರವಾಸದಲ್ಲಿದ್ದಾಗ, ತಮ್ಮ ಕೊಠಡಿ ಸ್ನೇಹಿತ ರೋಹಿತ್ ಶರ್ಮಾ ಇರುತ್ತಿದ್ದ ರೂಮಿಗೆ ರಹಸ್ಯವಾಗಿ ತಮ್ಮ ಗೆಳತಿಯನ್ನು ಕರೆದುಕೊಂಡು ಬರುತ್ತಿದ್ದ ಘಟನೆ!
2006ರಲ್ಲಿ ಶಿಖರ್ ಧವನ್ ಭಾರತ ‘ಎ’ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ಯುವ ಕ್ರಿಕೆಟಿಗರಾಗಿ ಕನಸುಗಳನ್ನು ಕಾಣುತ್ತಿದ್ದ ಆ ದಿನಗಳಲ್ಲಿ, ಧವನ್ ಅವರ ಕಣ್ಣು ವಿಮಾನ ನಿಲ್ದಾಣದಲ್ಲಿ ವಲಸೆ ಮಾರ್ಗದಲ್ಲಿ ಕಂಡ ಸುಂದರ ಹುಡುಗಿಯೊಬ್ಬಳ ಮೇಲೆ ಬಿದ್ದಿತ್ತು. ಆಕೆಯನ್ನು ನೋಡಿ ಇಷ್ಟಪಟ್ಟ ಧವನ್, ಸಂಭಾಷಣೆ ಆರಂಭಿಸಿದರು. ಕೆಲವೇ ಸಮಯದಲ್ಲಿ ಅವರಿಬ್ಬರೂ ಫೋನ್ ನಂಬರ್ ಮತ್ತು ಇಮೇಲ್ ಐಡಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದರು.
ಧವನ್ ಹೋಟೆಲ್ ಕೋಣೆಗೆ ತಲುಪಿದ ನಂತರ ಆ ಹುಡುಗಿಗೆ ಸಂದೇಶ ಕಳುಹಿಸಿದರು. ಅಲ್ಲಿಂದ ಬಂದ ಸಕಾರಾತ್ಮಕ ಪ್ರತಿಕ್ರಿಯೆಯ ನಂತರ, ಧವನ್ ಆಕೆಯನ್ನು ಪಾರ್ಟಿಗೆ ಆಹ್ವಾನಿಸಿದರು. ಇಬ್ಬರ ನಡುವೆ ಅತ್ಯಂತ ವೇಗವಾಗಿ ಉತ್ತಮ ಬಾಂಧವ್ಯ ಬೆಳೆದಿತ್ತು.
ರೋಹಿತ್ ಶರ್ಮಾ ‘ರಂಪಾಟ’ಕ್ಕೆ ಕಾರಣವಾದ ರಹಸ್ಯ ಭೇಟಿಗಳು!
ಈ ಹೊಸ ಪ್ರೀತಿಯ ಹುಮ್ಮಸ್ಸಿನಲ್ಲಿ ಧವನ್, ಆ ಹುಡುಗಿಯನ್ನು ತಮ್ಮ ಹೋಟೆಲ್ ಕೋಣೆಗೆ ಕರೆತರಲು ಆರಂಭಿಸಿದರು. ಆದರೆ, ಈ ಸಮಯದಲ್ಲಿ ಧವನ್ ಜೊತೆ ಕೊಠಡಿ ಹಂಚಿಕೊಂಡಿದ್ದು ಬೇರೆ ಯಾರೂ ಅಲ್ಲ, ಸ್ವತಃ ಭಾರತ ತಂಡದ ಈಗಿನ ನಾಯಕ ರೋಹಿತ್ ಶರ್ಮಾ!
ಧವನ್ ತಮ್ಮ ಆತ್ಮಚರಿತ್ರೆಯಲ್ಲಿ ಈ ಪ್ರಸಂಗವನ್ನು ನಗುತ್ತಲೇ ನೆನೆದಿದ್ದಾರೆ: “ನಾನು ಆ ಸುಂದರ ಹುಡುಗಿಯನ್ನು ಪ್ರೀತಿಸುತ್ತಿದ್ದೆ. ಅವಳು ನನಗೆ ಉತ್ತಮ ಎಂದು ನಾನು ಭಾವಿಸಿದ್ದೆ ಮತ್ತು ನಾನು ಅವಳನ್ನು ಮದುವೆಯಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಅವರ ಪುಸ್ತಕದಲ್ಲಿನ ಉಲ್ಲೇಖದ ಪ್ರಕಾರ, “ಪ್ರತಿ ಪಂದ್ಯದ ನಂತರ ನಾನು ಅವರನ್ನು ಭೇಟಿ ಮಾಡಲು ಹೋಗಿ ನನ್ನ ಕೋಣೆಗೆ ಕರೆತರುತ್ತಿದ್ದೆ. ರೋಹಿತ್‌ಗೆ ಇದೆಲ್ಲ ಇಷ್ಟವಾಗುತ್ತಿರಲಿಲ್ಲ. ರೋಹಿತ್ ಕೆಲವೊಮ್ಮೆ ದೂರು ನೀಡುತ್ತಿದ್ದ, ‘ನೀವು ನನ್ನನ್ನು ಮಲಗಲು ಬಿಡುತ್ತೀರಾ?’ ಎಂದು ರೇಗಾಡುತ್ತಿದ್ದ” ಎಂದು ಧವನ್ ವಿವರಿಸಿದ್ದಾರೆ. ಯುವ ಕ್ರಿಕೆಟಿಗರು, ಅದರಲ್ಲೂ ರೂಮ್‌ಮೇಟ್‌ಗಳು ಹಂಚಿಕೊಂಡ ಇಂತಹ ಖಾಸಗಿ ಕ್ಷಣಗಳು ಮತ್ತು ಅವು ಸೃಷ್ಟಿಸುತ್ತಿದ್ದ ಮಜವಾದ ಪರಿಸ್ಥಿತಿಗಳನ್ನು ಧವನ್ ತಮ್ಮ ಆತ್ಮಚರಿತ್ರೆಯ ಮೂಲಕ ಹೊರಹಾಕಿದ್ದಾರೆ.
ಶಿಖರ್ ಧವನ್ ಅವರ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ
ಕಳೆದ ವರ್ಷ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ ಶಿಖರ್ ಧವನ್, ಭಾರತದ ಪರ 34 ಟೆಸ್ಟ್ ಪಂದ್ಯಗಳಲ್ಲಿ 2315 ರನ್, 167 ಏಕದಿನ ಪಂದ್ಯಗಳಲ್ಲಿ 6793 ರನ್ ಮತ್ತು 68 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1759 ರನ್ ಬಾರಿಸಿದ್ದಾರೆ. ತಮ್ಮ ಅಬ್ಬರದ ಬ್ಯಾಟಿಂಗ್ ಶೈಲಿ ಮತ್ತು ಮೈದಾನದಲ್ಲಿನ ಉತ್ಸಾಹಭರಿತ ವ್ಯಕ್ತಿತ್ವದಿಂದ ‘ಗಬ್ಬರ್’ ಎಂದೇ ಗುರುತಿಸಿಕೊಂಡಿದ್ದ ಧವನ್, ಈಗ ತಮ್ಮ ಪುಸ್ತಕದ ಮೂಲಕ ಕ್ರಿಕೆಟ್ ಮೈದಾನದಾಚೆಗಿನ ರೋಚಕ ಕಥೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.