ಲಕ್ನೋ: ಹಣದ ಹಪಾಹಪಿಯು ಮನುಷ್ಯನನ್ನು ಎಷ್ಟೊಂದು ನೀಚ ಮಟ್ಟಕ್ಕೆ ತಳ್ಳಬಹುದು ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ಮತ್ತಷ್ಟು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಅತ್ತೆ-ಮಾವ, ತಮ್ಮ ಬೇಡಿಕೆ ಈಡೇರಿಸದ್ದಕ್ಕೆ ಸೊಸೆಗೆ ಎಚ್‌ಐವಿ(ಏಡ್‌ಸ್) ಸೋಂಕಿತ ಇಂಜೆಕ್ಷನ್ ಅನ್ನು ಚುಚ್ಚಿರುವಂಥ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಯುವತಿಯ ತಂದೆಯು ಪೊಲೀಸರಿಗೆ ದೂರು ನೀಡಿದ್ದು, 30 ವರ್ಷದ ಮಹಿಳೆಯ ಅತ್ತೆ-ಮಾವನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಹರಾನ್ಪುರದ ನ್ಯಾಯಾಲಯ ಆದೇಶ ಹೊರಡಿಸಿದೆ.
ನಾನು ನನ್ನ ಮಗಳು ಸೋನಲ್ ಸೈನಿಯನ್ನು 2023ರ ಫೆಬ್ರವರಿ 15ರಂದು ಉತ್ತರಾಖಂಡದ ಹರಿದ್ವಾರದ ಅಭಿಷೇಕ್ ಅಲಿಯಾಸ್ ಸಚಿನ್‌ಗೆ ಮದುವೆ ಮಾಡಿಕೊಟ್ಟಿದ್ದೆ. ಮದುವೆಯ ದಿನ ನಾವು 15 ಲಕ್ಷ ರೂ. ನಗದು ಮತ್ತು ಒಂದು ಕಾರನ್ನು ವರದಕ್ಷಿಣೆಯ ರೂಪದಲ್ಲಿ ವರನ ಕಡೆಯವರಿಗೆ ಕೊಟ್ಟಿದ್ದೆವು. ಆದರೆ, ಇದರಿಂದ ತೃಪ್ತರಾಗದ ಅಭಿಷೇಕ್‌ನ ಕುಟುಂಬ, 25 ಲಕ್ಷ ರೂಪಾಯಿ ಮತ್ತು ಸ್ಕಾರ್ಪಿಯೋ ಕಾರನ್ನು ನೀಡುವಂತೆ ಬೇಡಿಕೆಯಿಡತೊಡಗಿದರು. ಆದರೆ, ಅಷ್ಟೊಂದು ಹಣ ಹೊಂದಿಸಲಾಗದು ಎಂದು ನಾವು ಹೇಳಿದ್ದರಿಂದ ಅವರು ಕೋಪಗೊಂಡಿದ್ದರು. ನನ್ನ ಮಗಳನ್ನು ಮನೆಯಿಂದ ಹೊರಹಾಕಿದ್ದರು. ನಂತರ ನಮ್ಮ ಜಸ್ವಾಲಾ ಗ್ರಾಮ ಪಂಚಾಯತ್‌ನ ಮಧ್ಯಪ್ರವೇಶದೊಂದಿಗೆ ರಾಜಿ-ಸಂಧಾನ ನಡೆಸಿ, ಮತ್ತೆ ಮಗಳನ್ನು ಗಂಡನ ಮನೆಗೆ ಕಳುಹಿಸಿದ್ದೆವು.
ಆದರೆ, ಅಲ್ಲಿ ಮಗಳ ಮೇಲೆ ಅತ್ತೆ-ಮಾವ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು. ಅಲ್ಲದೇ ರಹಸ್ಯವಾಗಿ ಅವಳಿಗೆ ಎಚ್‌ಐವಿ ಸೋಂಕಿತ ಸೂಜಿಯನ್ನು ಚುಚ್ಚಿದ್ದರು. ಮಗಳ ಆರೋಗ್ಯ ದಿನೇ ದಿನೇ ಹದಗೆಡಲು ಆರಂಭಿಸಿದ ಕಾರಣ, ಆಸ್ಪತ್ರೆಗೆ ತೋರಿಸಲಾಯಿತು. ಆಗ ಆಕೆಗೆ ಎಚ್‌ಐವಿ ಪಾಸಿಟಿವ್ ಆಗಿರುವುದು ತಿಳಿದುಬಂತು. ಈ ಸುದ್ದಿ ಕೇಳಿ ನಮಗೆ ನಿಂತ ನೆಲವೇ ಕುಸಿದ ಅನುಭವವಾಯಿತು. ನಂತರ, ಅಳಿಯ ಅಭಿಷೇಕ್‌ನನ್ನು ಪರೀಕ್ಷೆಗೆ ಒಳಪಡಿಸಿ ನೋಡಿದೆವು. ಆದರೆ ಅವನ ಪರೀಕ್ಷೆಯ ವರದಿ ನೆಗೆಟಿವ್ ಬಂತು. ಆಗ ನಮಗೆ ನೈಜ ವಿಚಾರ ಗೊತ್ತಾಯಿತು. ಕೂಡಲೇ ನಾವು ಪೊಲೀಸರಿಗೆ ದೂರು ನೀಡಿದೆವು ಎಂದು ಸಂತ್ರಸ್ತೆಯ ತಂದೆ ಹೇಳಿಕೊಂಡಿದ್ದಾರೆ.
ಪೊಲೀಸರು ಸೋನಲ್ ಸೈನಿಯ ಅತ್ತೆ-ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾಾರೆ.