ಮುಂಬೈ: “ನೀನು ಸತತ 20 ಬಾರಿ ಡಕ್ ಔಟ್ ಆದರೂ ಚಿಂತೆಯಿಲ್ಲ, 21ನೇ ಬಾರಿಗೆ ಸೊನ್ನೆ ಸುತ್ತಿದ್ದಾಗ ಮಾತ್ರ ನಿನ್ನನ್ನು ತಂಡದಿಂದ ಕೈಬಿಡುತ್ತೇನೆ” – ಇದು ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು, ಸತತ ವೈಫಲ್ಯಗಳಿಂದ ಕಂಗೆಟ್ಟಿದ್ದ ಸಂಜು ಸ್ಯಾಮ್ಸನ್ಗೆ ನೀಡಿದ್ದ ಅಭಯದ ನುಡಿ. ಈ ಮಾತು ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ಅಚಲವಾದ ನಂಬಿಕೆಯೇ, ದಾರಿ ತಪ್ಪುತ್ತಿದ್ದ ಪ್ರತಿಭಾನ್ವಿತ ಬ್ಯಾಟರ್‌ನೊಬ್ಬನ ವೃತ್ತಿಜೀವನಕ್ಕೆ ಮರುಜೀವ ನೀಡಿ, ಇಂದು ಅವರನ್ನು ಭಾರತ ತಂಡದ ಅತ್ಯಂತ ಯಶಸ್ವಿ ಬ್ಯಾಟರ್‌ಗಳಲ್ಲಿ ಒಬ್ಬರನ್ನಾಗಿ ರೂಪಿಸಿದೆ.
ಒಂದು ಕಾಲದಲ್ಲಿ ಸಂಜು ಸ್ಯಾಮ್ಸನ್ ಅವರ ವೃತ್ತಿಜೀವನ ಅಕ್ಷರಶಃ ಅತಂತ್ರ ಸ್ಥಿತಿಯಲ್ಲಿತ್ತು. ಅಪಾರ ಪ್ರತಿಭೆಯಿದ್ದರೂ, ಅವರಿಗೆ ಸಿಕ್ಕ ಅವಕಾಶಗಳು ಬೆರಳೆಣಿಕೆಯಷ್ಟು. ಸಿಕ್ಕ ಅವಕಾಶಗಳಲ್ಲಿ ಮಿಂಚಲೇಬೇಕಾದ ಒತ್ತಡದಲ್ಲಿ ಅವರು ವಿಫಲರಾಗುತ್ತಿದ್ದರು. ಆದರೆ, ಟಿ20 ತಂಡಕ್ಕೆ ಹೊಸ ನಾಯಕನಾಗಿ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಆಗಿ ಗೌತಮ್ ಗಂಭೀರ್ ಬಂದಿದ್ದೇ ಸಂಜು ಪಾಲಿಗೆ ಅದೃಷ್ಟದ ಬಾಗಿಲು ತೆರೆಯಿತು.
ಗಂಭೀರ್-ಸೂರ್ಯನ ನಾಯಕತ್ವದ ಭರವಸೆಯೇ ಸಂಜುಗೆ ಮರುಜೀವ
ಈ ಬಗ್ಗೆ ಸ್ವತಃ ಸಂಜು ಸ್ಯಾಮ್ಸನ್ ಅವರೇ ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿ, “ನಾನು ದುಲೀಪ್ ಟ್ರೋಫಿ ಆಡುತ್ತಿದ್ದಾಗ, ಸೂರ್ಯ ನನ್ನ ಬಳಿ ಬಂದು, ‘ಚೇಟಾ (ಅಣ್ಣಾ), ನಿನಗಾಗಿ ಒಂದು ಒಳ್ಳೆಯ ಅವಕಾಶ ಕಾದಿದೆ. ಮುಂದೆ 7 ಟಿ20 ಪಂದ್ಯಗಳಿವೆ, ಆ ಏಳೂ ಪಂದ್ಯಗಳಲ್ಲಿ ನಿನಗೆ ಆರಂಭಿಕನಾಗಿ ಅವಕಾಶ ನೀಡುತ್ತೇನೆ’ ಎಂದರು. ನಾಯಕನೇ ಬಂದು ಹೀಗೆ ಹೇಳಿದಾಗ ಸಿಕ್ಕ ಆತ್ಮವಿಶ್ವಾಸ ದೊಡ್ಡದು,” ಎಂದು ನೆನಪಿಸಿಕೊಂಡಿದ್ದಾರೆ.
ಆದರೆ, ಜಿಂಬಾಬ್ವೆ ವಿರುದ್ಧ ಅರ್ಧಶತಕ ಗಳಿಸಿದ ನಂತರ, ಶ್ರೀಲಂಕಾ ವಿರುದ್ಧದ ಮುಂದಿನ ಎರಡು ಪಂದ್ಯಗಳಲ್ಲೂ ಸಂಜು ಡಕ್ ಔಟ್ ಆದರು. “ಇನ್ನು ನನ್ನ ಕಥೆ ಮುಗಿಯಿತು, ಅವಕಾಶ ಕೈತಪ್ಪಿ ಹೋಯಿತು ಎಂದು ನಾನು ಕುಗ್ಗಿದ್ದೆ. ಆಗ ನನ್ನ ಬಳಿ ಬಂದ ಗೌತಿ ಭಾಯ್ (ಗಂಭೀರ್), ‘ಏನಾಯ್ತು?’ ಎಂದು ಕೇಳಿದರು. ಸಿಕ್ಕ ಅವಕಾಶವನ್ನು ಕೈಚೆಲ್ಲಿದೆ ಎಂದಾಗ, ಅವರು, ‘ಅದಕ್ಕೇನಂತೆ? ನೀನು 21ನೇ ಬಾರಿ ಡಕ್ ಔಟ್ ಆದಾಗ ಮಾತ್ರ ನಿನ್ನನ್ನು ತಂಡದಿಂದ ತೆಗೆಯುತ್ತೇನೆ’ ಎಂದರು. ನಾಯಕ ಮತ್ತು ಕೋಚ್ ನೀಡಿದ ಈ ರೀತಿಯ ಭರವಸೆಯೇ, ನಾನು ನಂತರದ ಪಂದ್ಯಗಳಲ್ಲಿ ಅಬ್ಬರಿಸಲು ಕಾರಣವಾಯಿತು,” ಎಂದು ಸಂಜು ಹೇಳಿದ್ದಾರೆ.
ಈ ಭರವಸೆಯ ಫಲಿತಾಂಶ ಅಂಕಿಅಂಶಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಜುಲೈ 10, 2024ರ ನಂತರ, ಸಂಜು ಸ್ಯಾಮ್ಸನ್ ಭಾರತದ ಪರ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಈ ಅವಧಿಯಲ್ಲಿ ಅವರು 3 ಶತಕಗಳನ್ನು ಸಿಡಿಸಿ, ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದಾರೆ.
ನಾಯಕನೇ ಅಲಭ್ಯವಾದರೆ ನಾಯಕತ್ವ ಯಾರಿಗೆ? ಬಿಸಿಸಿಐಗೆ ಹೊಸ ತಲೆನೋವು
ಇಲ್ಲಿನ ವಿಪರ್ಯಾಸವೆಂದರೆ, ಸಂಜು ಅವರಂತಹ ಆಟಗಾರನಿಗೆ ಮರುಜೀವ ನೀಡಿದ ನಾಯಕ ಸೂರ್ಯಕುಮಾರ್ ಯಾದವ್ ಅವರೇ ಇದೀಗ ಗಾಯದ ಸಮಸ್ಯೆಯಿಂದಾಗಿ ಮುಂಬರುವ ಏಷ್ಯಾ ಕಪ್‌ಗೆ ಅಲಭ್ಯರಾಗುವ ಸಾಧ್ಯತೆಯಿದೆ. ಇದು ಭಾರತ ತಂಡವನ್ನು ಹೊಸ ನಾಯಕತ್ವದ ಬಿಕ್ಕಟ್ಟಿಗೆ ದೂಡಿದೆ.
ಉಪನಾಯಕನಾದ ಗಿಲ್, ಟೆಸ್ಟ್ ಕ್ರಿಕೆಟ್ ಮೇಲೆ ಗಮನಹರಿಸಿದ್ದಾರೆ ಮತ್ತು ಕಳೆದ ಒಂದು ವರ್ಷದಿಂದ ಒಂದೇ ಒಂದು ಟಿ20 ಪಂದ್ಯ ಆಡಿಲ್ಲ. ಏಷ್ಯಾ ಕಪ್ ನಂತರ ತಕ್ಷಣವೇ ಟೆಸ್ಟ್ ಸರಣಿ ಆರಂಭವಾಗುವುದರಿಂದ, ಅವರನ್ನು ಆಯ್ಕೆ ಮಾಡುವುದೇ ಕಷ್ಟ.
ಮತ್ತೊಬ್ಬ ಉಪನಾಯಕ ಅಕ್ಷರ್ ಪಟೇಲ್ ಅವರ ಆಡುವ ಹನ್ನೊಂದರ ಬಳಗದ ಸ್ಥಾನವೇ ಖಚಿತವಿಲ್ಲ. ಇತರ ಸ್ಪಿನ್ನರ್‌ಗಳು ಉತ್ತಮ ಫಾರ್ಮ್‌ನಲ್ಲಿರುವುದರಿಂದ, ಅವರಿಗೆ ನಾಯಕತ್ವ ನೀಡುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ಇದೆ.
ಅತ್ಯಂತ ಅನುಭವಿ ಹಾರ್ದಿಕ್ ಪಾಂಡ್ಯ ಅವರನ್ನು ಈ ಹಿಂದೆ ನಾಯಕತ್ವಕ್ಕೆ ಪರಿಗಣಿಸಿರಲಿಲ್ಲ. ಈಗ ಅನಿವಾರ್ಯ ಪರಿಸ್ಥಿತಿಯಲ್ಲಿ ಅವರನ್ನು ನಾಯಕನನ್ನಾಗಿ ಮಾಡುವುದು ಬಿಸಿಸಿಐನ ಹಿಂದಿನ ನಿರ್ಧಾರಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.



















