ತಿರಾನೆ: ಜೇಡಗಳನ್ನು ಕಂಡರೆ ಭಯಪಡುವವರಿಗೆ ಇದೊಂದು ದುಃಸ್ವಪ್ನವೇ ಇರಬಹುದು. ಹೌದು, ಏಕೆಂದರೆ ವಿಜ್ಞಾನಿಗಳು ಅಲ್ಬೇನಿಯಾ-ಗ್ರೀಕ್ ಗಡಿಯಲ್ಲಿರುವ ಆಳವಾದ, ಕತ್ತಲೆಯ ಗುಹೆಯೊಳಗೆ ವಿಶ್ವದ ಅತಿದೊಡ್ಡ ಜೇಡರ ಬಲೆಯನ್ನು ಪತ್ತೆಹಚ್ಚಿದ್ದಾರೆ. ಈ ಬೃಹತ್ ವಸಾಹತು ಒಟ್ಟು 1,140 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಇದರಲ್ಲಿ 69,000 ಮನೆ ಜೇಡಗಳು ಮತ್ತು 42,000ಕ್ಕೂ ಹೆಚ್ಚು ಕುಬ್ಜ ನೇಕಾರ ಜೇಡಗಳು ಸೇರಿದಂತೆ ಒಟ್ಟು 1,10,000ಕ್ಕೂ ಹೆಚ್ಚು ಜೀವಿಗಳು ವಾಸಿಸುತ್ತಿವೆಯಂತೆ.
ಸೂರ್ಯನ ಬೆಳಕಿಲ್ಲದ ಮತ್ತು ವಿಷಕಾರಿ ಹೈಡ್ರೋಜನ್-ಸಲ್ಫರ್ ಅನಿಲದ ಪ್ರಮಾಣ ಹೆಚ್ಚಿರುವ ಈ ಗಂಧಕದ ಗುಹೆಯಲ್ಲಿ ಇಷ್ಟು ದೊಡ್ಡ ಜೇಡರ ವಸಾಹತು ಹೇಗೆ ಉಳಿದುಕೊಂಡಿದೆ ಎಂಬುದು ಸಂಶೋಧಕರನ್ನು ದಿಗ್ಭ್ರಮೆಗೊಳಿಸಿದೆ. “ಈ ಬೃಹತ್ ಜೇಡರ ವಸಾಹತು ಗುಹೆಯ ಪ್ರವೇಶದ್ವಾರದಿಂದ ಸುಮಾರು 50 ಮೀಟರ್ ದೂರದಲ್ಲಿ, ಸಂಪೂರ್ಣ ಕತ್ತಲಿರುವ ಪ್ರದೇಶದಲ್ಲಿ ಕಂಡುಬಂದಿದೆ” ಎಂದು ‘ಸಬ್ಟರೇನಿಯನ್ ಬಯಾಲಜಿ’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಉಲ್ಲೇಖಿಸಿದೆ.
ಇದುವರೆಗೆ ದಾಖಲಾದ ಅತಿದೊಡ್ಡ ಜೇಡರ ವಸಾಹತುಗಳಲ್ಲಿ ಇದೂ ಒಂದಾಗಿದ್ದು, ಈ ಎರಡು ಪ್ರಭೇದದ ಜೇಡಗಳು ಈ ರೀತಿ ಒಟ್ಟಾಗಿ ಸೇರಿ ಬಲೆ ನಿರ್ಮಿಸುವುದು ಇದೇ ಮೊದಲು ಎಂದು ಅಧ್ಯಯನ ಹೇಳಿದೆ.
ಆಹಾರ ಪದ್ಧತಿ ಮತ್ತು ಹೊಂದಾಣಿಕೆ
ಈ ಭೂಗತ ಜೇಡಗಳು, ಗಂಧಕವನ್ನು ತಿನ್ನುವ ಸೂಕ್ಷ್ಮಜೀವಿಗಳನ್ನು ಸೇವಿಸುವ ಸಣ್ಣ ನೊಣಗಳನ್ನು ತಿಂದು ಬದುಕುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಗಂಧಕಯುಕ್ತ ಆಹಾರವು ಈ ಜೇಡಗಳ ಸೂಕ್ಷ್ಮಜೀವಿಗಳ ಮೇಲೆ ಪ್ರಭಾವ ಬೀರಿದ್ದು, ಗುಹೆಯ ಹೊರಗೆ ವಾಸಿಸುವ ಇದೇ ಪ್ರಭೇದದ ಜೇಡಗಳಿಗೆ ಹೋಲಿಸಿದರೆ ಇವುಗಳ ದೇಹದಲ್ಲಿನ ಸೂಕ್ಷ್ಮಜೀವಿಗಳ ವೈವಿಧ್ಯತೆ ಕಡಿಮೆ ಇರುವುದು ಕಂಡುಬಂದಿದೆ.
ಆಣ್ವಿಕ ದತ್ತಾಂಶಗಳ ಪ್ರಕಾರ, ಗುಹೆಯೊಳಗಿನ ಜೇಡಗಳು ಹೊರಗಿನ ತಮ್ಮ ಸಂಬಂಧಿ ಜೇಡಗಳಿಗಿಂತ ಆನುವಂಶಿಕವಾಗಿ ಭಿನ್ನವಾಗಿವೆ. ಇದು ಅವು ತಮ್ಮ ಕತ್ತಲೆಯ ಪರಿಸರಕ್ಕೆ ಹೊಂದಿಕೊಂಡಿರುವುದನ್ನು ಸೂಚಿಸುತ್ತದೆ.
ಈ ಬೃಹತ್ ಜೇಡರ ಬಲೆಯನ್ನು ಜೆಕ್ ಸ್ಪೆಲಿಯಾಲಜಿಕಲ್ ಸೊಸೈಟಿಯ ಅನ್ವೇಷಕರು 2022ರಲ್ಲಿ ಮೊದಲು ಪತ್ತೆ ಮಾಡಿದ್ದರು. ನಂತರ, 2024ರಲ್ಲಿ ವಿಜ್ಞಾನಿಗಳ ತಂಡವು ಗುಹೆಗೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿತ್ತು.
ಇದನ್ನೂ ಓದಿ: ಎರ್ನಾಕುಲಂ-ಬೆಂಗಳೂರು ಸೇರಿ 4 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ



















