ಬೆಂಗಳೂರು: ನೀವು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ (ಎಸ್ ಬಿ ಐ) ಇಂದಿನಿಂದ ಇಮ್ಮೀಡಿಯಟ್ ಪೇಮೆಂಟ್ ಸರ್ವಿಸ್ (ಐಎಂಪಿಎಸ್) ಮೂಲಕ ಹಣ ವರ್ಗಾವಣೆ ಮಾಡುತ್ತೀರಾ? ಹಾಗಾದರೆ, ನಿಮಗೆ ಆಗಸ್ಟ್ 15ರಿಂದ ಶುಲ್ಕ ಅನ್ವಯವಾಗುತ್ತದೆ. ಹೌದು, ಐಎಂಪಿಎಸ್ ಮೂಲಕ 25 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ವರ್ಗಾವಣೆ ಮಾಡುವವರಿಗೆ ಶುಕ್ರವಾರದಿಂದ ಶುಲ್ಕ ವಿಧಿಸಲು ಎಸ್ ಬಿ ಐ ತೀರ್ಮಾನಿಸಿದೆ. ಎಷ್ಟು ಹಣ ವರ್ಗಾವಣೆ ಮಾಡಿದರೆ ಎಷ್ಟು ಶುಲ್ಕ ತಗುಲುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಹೀಗಿದೆ ಶುಲ್ಕದ ವಿವರ
25,001 ರೂ.-1 ಲಕ್ಷ ರೂ.- 2 ರೂಪಾಯಿ (ಜಿ ಎಸ್ ಟಿ ಪ್ರತ್ಯೇಕ)
1-2 ಲಕ್ಷ ರೂ.- 6 ರೂಪಾಯಿ (ಜಿ ಎಸ್ ಟಿ ಪ್ರತ್ಯೇಕ)
2-5 ಲಕ್ಷ ರೂ.- 10 ರೂಪಾಯಿ (ಜಿ ಎಸ್ ಟಿ ಪ್ರತ್ಯೇಕ)
ಐಎಂಪಿಎಸ್ ಎಂಬುದು ಆನ್ ಲೈನ್ ಮೂಲಕ ಕ್ಷಿಪ್ರವಾಗಿ ಮಾಡುವ ಪೇಮೆಂಟ್ ವ್ಯವಸ್ಥೆಯಾಗಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (ಎನ್ ಪಿ ಸಿ ಐ) ಈ ಸೇವೆಯನ್ನು ನಿರ್ವಹಣೆ ಮಾಡುತ್ತದೆ. ಆನ್ ಲೈನ್ ಮೂಲಕ ಗರಿಷ್ಠ 5 ಲಕ್ಷ ರೂಪಾಯಿಯ್ನು ವರ್ಗಾವಣೆ ಮಾಡಬಹುದಾಗಿದೆ. ಇದು ದಿನದ 24 ಗಂಟೆ, ವಾರದ ಏಳು ದಿನವೂ ಸಿಗುವ ಸೌಲಭ್ಯವಾಗಿದೆ.
ಹೊಸ ನಿಯಮವು ಸಾಮಾನ್ಯ ಗ್ರಾಹಕರಿಗೆ ಅನ್ವಯವಾಗುತ್ತದೆ. ಸ್ಯಾಲರಿ ಪ್ಯಾಕೇಜ್ ಇರುವ ಖಾತೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೆ, ಕಾರ್ಪೊರೇಟ್ ಗ್ರಾಹಕರಿಗೆ ಸೆಪ್ಟೆಂಬರ್ 8ರಿಂದ ಶುಲ್ಕ ಅನ್ವಯವಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ವಿಶೇಷ ಕೆಟಗರಿಯ ವ್ಯಾಪಾರಿಗಳಿಗೆ ಶುಲ್ಕದಿಂದ ವಿನಾಯಿತಿ ಮುಂದುವರಿಯಲಿದೆ. ಅಂದರೆ, ಕರೆಂಟ್ ಅಕೌಂಟ್ ಹೊಂದಿರುವ ಚಿನ್ನ, ವಜ್ರ, ಪ್ಲಾಟಿನಂ, ಸರ್ಕಾರಿ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು ಐಎಂಪಿಎಸ್ ಮೂಲಕ ಹಣ ವರ್ಗಾವಣೆ ಮಾಡಿದರೆ, ಅವರಿಗೆ ಶುಲ್ಕ ಇರುವುದಿಲ್ಲ.



















