ಬೆಂಗಳೂರು: ಕೆಲ ತಿಂಗಳ ಹಿಂದಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಶೇ.1ರಷ್ಟು ಅಂದರೆ, 100 ಬೇಸಿಸ್ ಪಾಯಿಂಟ್ ಗಳನ್ನು ಇಳಿಕೆ ಮಾಡಿತ್ತು. ಇದರಿಂದಾಗಿ ಬ್ಯಾಂಕುಗಳು ಕೂಡ ಗೃಹ ಸಾಲ ಸೇರಿ ಯಾವುದೇ ವೈಯಕ್ತಿಕ ಸಾಲದ ಮೇಲಿನ ಬಡ್ಡಿಯನ್ನು ಇಳಿಕೆ ಮಾಡಿದ್ದವು. ಹಾಗಾಗಿ, ಗೃಹ ಸಾಲ ಮಾಡಿದವರಿಗೆ ಇಎಂಐ ಹೊರೆ ಇಳಿಕೆಯಾಗಿತ್ತು. ಇದರ ಬೆನ್ನಲ್ಲೇ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಈಗ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಏರಿಕೆ (SBI Hikes Home Loan Rates) ಮಾಡಿದೆ. ಹಾಗಾಗಿ, ಇದು ಗೃಹ ಸಾಲ ಮಾಡಿದವರಿಗೆ ಹಾಗೂ ಮಾಡುವವರಿಗೆ ಕಹಿ ಸುದ್ದಿಯಾಗಿದೆ.
ಹೌದು, ಎಸ್ ಬಿ ಐ ಈಗ ಗೃಹ ಸಾಲದ ಬಡ್ಡಿದರಗಳಲ್ಲಿ 25 ಬೇಸಿಸ್ ಪಾಯಿಂಟ್ ಹೆಚ್ಚಿಸಿದೆ. ಇದರ ನಂತರ, ಎಸ್ ಬಿ ಐನ ಗೃಹ ಸಾಲದ ಬಡ್ಡಿದರಗಳು ಶೇ.7.50 ರಿಂದ 8.70 ರವರೆಗೆ ಏರಿಕೆಯಾಗಿವೆ. ಇದಕ್ಕೂ ಮೊದಲು ಶೇ.7.5 ರಿಂದ ಶೇ.8.45 ರವರೆಗೆ ಬಡ್ಡಿದರ ನಿಗದಿ ಮಾಡಲಾಗಿತ್ತು.
ಇಎಂಐ ಎಷ್ಟು ಹೆಚ್ಚಾಗುತ್ತದೆ?
ನೀವು 30 ಲಕ್ಷ ರೂಪಾಯಿ ಗೃಹಸಾಲವನ್ನು 20 ವರ್ಷಗಳ ಅವಧಿಗೆ ತೆಗೆದುಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ಎಸ್ ಬಿ ಐ ಮೊದಲಿನ ಶೇ.8.45 ರೂಪಾಯಿ ಬಡ್ಡಿದರ ಅನ್ವಯಿಸಿದರೆ, ನಿಮ್ಮ ಮಾಸಿಕ ಇಎಂಐ 25,830 ರೂಪಾಯಿ ಆಗುತ್ತದೆ. ಆದರೆ, ಈಗ ಶೇ.8.70ರ ಬಡ್ಡಿ ದರ ಅನ್ವಯಿಸಿದರೆ 26,278 ರೂಪಾಯಿ ಇಎಂಐ ಪಾವತಿಸಬೇಕಾಗುತ್ತದೆ. ಅಂದರೆ, ಸುಮಾರು 450 ರೂಪಾಯಿ ಇಎಂಐ ಹೊರೆಯಾಗುತ್ತದೆ. ಸಾಲದ ಮೊತ್ತ ಹೆಚ್ಚಾದಂತೆಲ್ಲ ಇಎಂಐ ಹೊರೆಯು ಜಾಸ್ತಿಯಾಗುತ್ತದೆ.
ಇದೇ ರೀತಿ ಬೇರೆ ಬ್ಯಾಂಕುಗಳಲ್ಲಿರುವ ಗೃಹಸಾಲದ ಮೇಲಿನ ಬಡ್ಡಿದರವನ್ನು ನೋಡುವುದಾದರೆ, ಐಸಿಐಸಿಐ ಬ್ಯಾಂಕಿನಲ್ಲಿ ಶೇ.7.70ರಿಂದ ಬಡ್ಡಿದರ ಆರಂಭವಾಗುತ್ತದೆ. ಇನ್ನು ಎಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ ಶೇ.7.90ರಿಂದ ಬಡ್ಡಿದರ ಆರಂಭವಾಗುತ್ತದೆ. ಕೋಟಕ್ ಮಹೀಂದ್ರಾ ಬ್ಯಾಂಕಿನಲ್ಲಿ ಶೇ.7.99ರಿಂದ ಬಡ್ಡಿ ಆರಂಭವಾಗುತ್ತದೆ.



















