ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ ದೇಶದಲ್ಲೇ ಬೃಹತ್ ಸಾರ್ವಜನಿಕ ವಲಯದ ಬ್ಯಾಂಕ್ ಎನಿಸಿದೆ. ಹಾಗಾಗಿ, ಕೋಟ್ಯಂತರ ಜನ ಎಸ್ ಬಿಐನಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಆದರೆ, ಎಸ್ ಬಿಐ(SBI) ಈಗ “ಎಂ ಕ್ಯಾಶ್” ಎಂಬ ಆನ್ ಲೈನ್ ಹಣ ವರ್ಗಾವಣೆ ಸೇವೆಯನ್ನು ಸ್ಥಗಿತಗೊಳಿಸಿದೆ. ಎಸ್ ಬಿಐ ಗ್ರಾಹಕರು ಇನ್ನುಮುಂದೆ ಎಂ ಕ್ಯಾಶ್ ಸೇವೆಯನ್ನು ಪಡೆಯಲು ಆಗುವುದಿಲ್ಲ. ಡಿಸೆಂಬರ್ 1ರಿಂದಲೇ ಹೊಸ ನಿಯಮ ಜಾರಿಗೆ ಬಂದಿದೆ.
ಎಸ್ ಬಿಐ ಆನ್ ಲೈನ್ ಅಥವಾ ಯೋನೊ ಲೈಟ್ ನಲ್ಲಿ ಇದುವರೆಗೆ ಎಂ ಕ್ಯಾಶ್ ಸೌಲಭ್ಯ ಇತ್ತು. ಅಂದರೆ, ಯಾವುದೇ ವ್ಯಕ್ತಿಗಳ ಖಾತೆ ಸಂಖ್ಯೆ ಸೇರಿ ವಿವಿಧ ವಿವರ ಇಲ್ಲದೆ, ಬರೀ ಅವರ ಮೊಬೈಲ್ ನಂಬರ್ ಹಾಗೂ ಇ-ಮೇಲ್ ಐಡಿ ಮೂಲಕವೇ ಹಣ ಕಳುಹಿಸಬಹುದಿತ್ತು. ಆದರೆ, ಆನ್ ಲೈನ್ ಮೂಲಕ ಹಣ ವರ್ಗಾವಣೆಯಲ್ಲಿ ಸುರಕ್ಷತೆ ಅಳವಡಿಸಿಕೊಳ್ಳುವ ದೃಷ್ಟಿಯಿಂದ ಎಸ್ ಬಿಐ ಈಗ ಎಂ ಕ್ಯಾಶ್ ಸೌಲಭ್ಯವನ್ನು ಸ್ಥಗಿತಗೊಳಿಸಿದೆ.
ಹಾಗಾಗಿ, ಎಸ್ ಬಿಐ ಗ್ರಾಹಕರು ಇನ್ನುಮುಂದೆ ಯುಪಿಐ ಅಗ್ರಿಗೇಟರ್ ಗಳ ಮೂಲಕವೇ ಹಣ ಕಳುಹಿಸುವುದ ಹಾಗೂ ಸ್ವೀಕರಿಸುವುದು ಸಾಧ್ಯವಿದೆ. ಆದಾಗ್ಯೂ, ಎಸ್ ಬಿಐ ಆ್ಯಪ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕವೂ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ. ಇದರ ಜತೆಗೆ, ನೆಫ್ಟ್, ಆರ್ ಟಿಜಿಎಸ್, ಐಎಂಪಿಎಸ್ ಮೂಲಕವೂ ಹಣ ವರ್ಗಾವಣೆ ಮಾಡಬಹುದಾಗಿದೆ. ಇಂತಹ ವೇದಿಕೆಗಳನ್ನು ಬಳಸಿಕೊಳ್ಳಿ ಎಂದು ಗ್ರಾಹಕರಿಗೆ ಎಸ್ ಬಿಐ ತಿಳಿಸಿದೆ.
ನೋಂದಣಿಯ ಅವಶ್ಯಕತೆಯೇ ಇಲ್ಲದೆ, ಮೊಬೈಲ್ ನಂಬರ್ ಅಥವಾ ಇ-ಮೇಲ್ ಮೂಲಕವೇ ಹಣ ಕಳುಹಿಸುವ ಎಂ ಕ್ಯಾಶ್ ಸೌಲಭ್ಯವು ಆನ್ ಲೈನ್ ಹಣ ವರ್ಗಾವಣೆಗೆ ಸುರಕ್ಷಿತವಲ್ಲ ಎಂದು ಎಸ್ ಬಿಐ ಅದನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ನೀವು ಕಾರು ಖರೀದಿಸಿದ ಬಳಿಕ ಸಿಗಲಿದೆ 30 ಸಾವಿರ ರೂ. ರಿಫಂಡ್ : ಹೇಗೆ ಅಂತೀರಾ?



















