ಬೆಂಗಳೂರು: ದೇಶದ ಬೃಹತ್ ಬ್ಯಾಂಕ್ ಎನಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ ಬಿಐ)ನಲ್ಲಿ 1,194 ಲೆಕ್ಕಪರಿಶೋಧಕರ ಹುದ್ದೆಗಳು ಖಾಲಿ (SBI Recruitment 2025) ಇದ್ದು, ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮಾರ್ಚ್ 15 ಕೊನೆಯ ದಿನವಾಗಿದೆ. ಎಸ್ ಬಿಐನಲ್ಲಿ ಕಾರ್ಯನಿರ್ವಹಿಸಿ, ನಿವೃತ್ತರಾದ ಅಧಿಕಾರಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ನಿವೃತ್ತ ಅಧಿಕಾರಿಗಳ ಸೇವೆಯನ್ನು ಪಡೆಯಲು ಎಸ್ ಬಿಐ ಈ ಯೋಜನೆ ರೂಪಿಸಿದ್ದು, 65 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆ ಬೇಕು?
- ಎಸ್ ಬಿಐ ನಿವೃತ್ತ ನೌಕರರಾಗಿರಬೇಕು
- ವಯಸ್ಸು 65 ವರ್ಷ ಮೀರಿರಬಾರದು
- ಎಸ್ ಸಿ, ಎಸ್ ಟಿಯವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ
- ಒಬಿಸಿಯವರಿಗೆ ಮೂರು ವರ್ಷ ಸಡಿಲಿಕೆ
- ಕಾರ್ಯಕ್ಷಮತೆ ಆಧಾರದ ಮೇಲೆ ನೇಮಕ
ಸ್ಪರ್ಧಾತ್ಮಕ ಪರೀಕ್ಷೆ ಇರಲ್ಲ
ಎಲ್ಲ 1,194 ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಎಸ್ ಬಿಐನಲ್ಲೇ ನಿವೃತ್ತರಾದ ನೌಕರರ ಅನುಭವವನ್ನು ಬಳಸಿಕೊಳ್ಳುವುದು ಬ್ಯಾಂಕಿನ ಉದ್ದೇಶವಾಗಿದೆ. ಹಾಗಾಗಿ, ಹುದ್ದೆಗಳ ನೇಮಕಕ್ಕೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇರುವುದಿಲ್ಲ. ನಿವೃತ್ತ ನೌಕರರ ಕಾರ್ಯಕ್ಷಮತೆ, ಕೌಶಲಗಳನ್ನು ಆಧರಿಸಿ ಉದ್ಯೋಗ ನೀಡಲಾಗುತ್ತದೆ.
ಯಾವ ಕೌಶಲಗಳು ಬೇಕು?
ಅರ್ಜಿ ಸಲ್ಲಿಸುವವರು ಹಲವು ಕೌಶಲಗಳನ್ನು ಹೊಂದಿರಬೇಕು ಎಂದು ಎಸ್ ಬಿಐ ತಿಳಿಸಿದೆ. ಉತ್ತಮ ಸಂವಹನ, ಇಂಗ್ಲಿಷ್ ಮೇಲೆ ಹಿಡಿತ, ಒತ್ತಡ ನಿರ್ವಹಣೆ, ತುರ್ತು ಸಂದರ್ಭದಲ್ಲಿ ಸಮರ್ಥ ನಿರ್ಧಾರ ತೆಗೆದುಕೊಳ್ಳುವುದು, ಗ್ರಾಹಕರ ಜತೆ ಸಮಾಧಾನದಿಂದ ವರ್ತಿಸುವುದು, ಅಂಕಿ-ಅಂಶಗಳು, ಖಾತೆಗಳ ಬಗ್ಗೆ ತಿಳಿವಳಿಕೆ ಸೇರಿ ಹಲವು ಕೌಶಲಗಳು ಇದ್ದವರಿಗೆ ಆದ್ಯತೆ ಎಂದು ಎಸ್ ಬಿಐ ತಿಳಿಸಿದೆ. ಎಸ್ ಬಿಐನ sbi.co.in ವೆಬ್ ಸೈಟ್ ಗೆ ತೆರಳಿ ಹೆಚ್ಚಿನ ಮಾಹಿತಿ ಪಡೆದುಕೊಂಡು, ಅಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿದೆ.