ಬೆಂಗಳೂರು: ನಿವೃತ್ತಿ ಬಳಿಕ ಮಕ್ಕಳಿಗೆ ಹೊರೆಯಾಗಬಾರದು, ನಿವೃತ್ತಿ ಜೀವನವನ್ನೂ ಸ್ವಾವಲಂಬಿಯಾಗಿ ಕಳೆಯಬೇಕು ಎಂದು ಹೆಚ್ಚಿನ ಜನ ಬಯಸುತ್ತಾರೆ. ಹಾಗಾಗಿ, ಇತ್ತೀಚೆಗೆ ಕೆಲಸಕ್ಕೆ ಸೇರಿದ ಕೂಡಲೇ ನಿವೃತ್ತಿ ಯೋಜನೆಯನ್ನು ರೂಪಿಸುತ್ತಾರೆ. ಯಾವುದಾದರೂ ಒಂದು ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡೋ, ಹೂಡಿಕೆ ಮೂಲಕವೋ ಪ್ರತಿ ತಿಂಗಳು ನಿವೃತ್ತಿ ಜೀವನಕ್ಕಾಗಿ ಹಣ ಉಳಿಸುತ್ತಾರೆ. ಹೀಗೆ, ಕೆಲಸಕ್ಕೆ ಸೇರಿದ ಕೂಡಲೇ ನಿವೃತ್ತಿಗಾಗಿ ಹೂಡಿಕೆ ಮಾಡಿ, 60 ವರ್ಷದ ಬಳಿಕ ಮಾಸಿಕ 34,315 ರೂ. ಪಿಂಚಣಿ ನೀಡುವ ಯೋಜನೆ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ.
ಹೌದು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು (ಎನ್ ಪಿ ಎಸ್) ಖಾಸಗಿ ನೌಕರರಿಗೂ ನಿವೃತ್ತಿ ಯೋಜನೆ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದೆ. ಅದರಲ್ಲೂ, ಒಬ್ಬ ವ್ಯಕ್ತಿಯು ಎನ್ ಪಿ ಎಸ್ ಯೋಜನೆ ಅಡಿಯಲ್ಲಿ ಮಾಸಿಕ 5 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ, 60 ವರ್ಷದ ಬಳಿಕ ಅವರು 1.72 ಕೋಟಿ ರೂ. ಗಳಿಸಲಿದ್ದಾರೆ. ಇದರಲ್ಲಿ ಶೇ.60ರಷ್ಟು ಹಣವನ್ನು ಅಂದರೆ, 1.03 ಕೋಟಿ ರೂಪಾಯಿಯನ್ನು ಒಮ್ಮೆಯೇ ವಿತ್ ಡ್ರಾ ಮಾಡಬಹುದಾಗಿದೆ.
ಎನ್ ಪಿ ಎಸ್ ಮಾರುಕಟ್ಟೆ ಆಧಾರಿತವಾಗಿರುವ ಕಾರಣ ಶೇ.10-12ರಷ್ಟು ರಿಟರ್ನ್ಸ್ ನೀಡುತ್ತದೆ. ಒಬ್ಬ ವ್ಯಕ್ತಿ 25ನೇ ವರ್ಷದಿಂದ ಮಾಸಿಕ 5 ಸಾವಿರ ರೂ. ಉಳಿಸಿದರೆ, ಶೇ.10ರ ರಿಟರ್ನ್ಸ್ ಲೆಕ್ಕಾಚಾರದಲ್ಲಿ 60ನೇ ವಯಸ್ಸಿಗೆ 1.03 ಕೋಟಿ ರೂ. ಲಂಪ್ಸಮ್ ಅಮೌಂಟ್ ಪಡೆಯಲಿದ್ದಾರೆ. ಉಳಿದ 69 ಲಕ್ಷ ರೂಪಾಯಿಯಲ್ಲಿ ಅವರು ಜೀವನಪರ್ಯಂತ 34,315 ರೂ. ಪಿಂಚಣಿ ಪಡೆಯಲಿದ್ದಾರೆ.
25ನೇ ವಯಸ್ಸಿನಿಂದ ಮಾಸಿಕ 5 ಸಾವಿರ ರೂ. ಉಳಿಸಿದರೆ, 60ನೇ ವಯಸ್ಸಿಗೆ ಹೂಡಿಕೆ ಮೊತ್ತವು 21 ಲಕ್ಷ ರೂ. ಆಗಿರುತ್ತದೆ. ಇದಕ್ಕೆ ಶೇ.10ರಷ್ಟು ರಿಟರ್ನ್ಸ್ ಎಂದರೂ 1.72 ಕೋಟಿ ರೂ. ಆಗುತ್ತದೆ. ಎನ್ ಪಿ ಎಸ್ ಟೈರ್-1 ಅಕೌಂಟ್ ಆಯ್ಕೆ ಮಾಡಿಕೊಂಡು, ಹೂಡಿಕೆ ಮಾಡಿದರೆ, ಯಾರು ಬೇಕಾದರೂ ನಿವೃತ್ತಿಯ ಜೀವನವನ್ನು ಯಾರಿಗೂ ಹೊರೆಯಾಗದಂತೆ ಕಳೆಯಬಹುದಾಗಿದೆ.