ಬೆಂಗಳೂರು: ಮೊದಲೆಲ್ಲ ನಮ್ಮ ಆದಾಯದಲ್ಲಿ ಉಳಿಸಿದ ಹಣವನ್ನೇ ಗಳಿಸಿದ ಹಣ ಎನ್ನುತ್ತಿದ್ದರು. ಆದರೆ, ಈಗ ಉಳಿಕೆ ಮಾಡುವ ಜತೆಗೆ ಹೂಡಿಕೆ ಮಾಡಿದರೆ ಮಾತ್ರ ಗಳಿಕೆ ಹೆಚ್ಚಾಗುತ್ತದೆ. ಹೀಗೆ, ಉಳಿಕೆ ಮಾಡಿದ ಹಣವನ್ನು ಗಳಿಸಲೂ ಬಿಡಬೇಕು, ಅದು ಸುರಕ್ಷಿತವಾಗಿರಬೇಕು ಎನ್ನುವವರಿಗೆ ಪೋಸ್ಟ್ ಆಫೀಸ್ ಆರ್ ಡಿ ಉತ್ತಮ ಯೋಜನೆಯಾಗಿದೆ. ಅದರಲ್ಲೂ, ತಿಂಗಳಿಗೆ ಕೇವಲ 3 ಸಾವಿರ ರೂಪಾಯಿಯನ್ನು ಉಳಿಕೆ ಮಾಡಿದರೆ, ಅದು 5 ವರ್ಷದಲ್ಲಿ 34 ಸಾವಿರ ರೂಪಾಯಿ ಬಡ್ಡಿ ಲಾಭದ ಜತೆಗೆ ಒಟ್ಟು 2.14 ಲಕ್ಷ ರೂಪಾಯಿ ನಿಮ್ಮದಾಗುತ್ತದೆ.
ನೀವು ದಿನಕ್ಕೆ ರೂ. 100 ಠೇವಣಿ ಇಟ್ಟರೆ, ತಿಂಗಳಿಗೆ ರೂ. 3,000 ಆಗುತ್ತದೆ. ಹೀಗೆ ಐದು ವರ್ಷಗಳ ಕಾಲ ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆ ರೂ. 1,80,000 ಆಗುತ್ತದೆ. ಮೆಚ್ಯೂರಿಟಿಯ ಸಮಯದಲ್ಲಿ, ಅಂದಾಜು ರೂ. 34,097 ಬಡ್ಡಿಯೊಂದಿಗೆ, ನಿಮಗೆ ಒಟ್ಟು ರೂ. 2,14,097 ಸಿಗುತ್ತದೆ. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ರೀತಿ ಯಾವುದೇ ರಿಸ್ಕ್ ಇಲ್ಲದೆ ಶೇ.6.7ರ ಬಡ್ಡಿದರದಲ್ಲಿ ಲಾಭ ಸಿಗುತ್ತದೆ.
ಇದೇ ರೀತಿ, ತಿಂಗಳಿಗೆ 5 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ, 5 ವರ್ಷದಲ್ಲಿ ನೀವು 3 ಲಕ್ಷ ರೂಪಾಯಿ ಹೂಡಿಕೆ ಮಾಡಿದಂತಾಗುತ್ತದೆ. ಇದಕ್ಕೆ 56,829 ರೂಪಾಯಿ ಬಡ್ಡಿ ಸೇರಿ ನಿಮಗೆ 3.56 ಲಕ್ಷ ರೂಪಾಯಿ ಸಿಗುತ್ತದೆ. ಜೀವನದಲ್ಲಿ ಯಾವುದೇ ರಿಸ್ಕ್ ಇಲ್ಲದೆ ಹಣ ಗಳಿಸಬಹುದು ಎನ್ನುವವರಿಗೆ ಇದು ಉತ್ತಮ ಯೋಜನೆಯಾಗಿದೆ.
ಈ ಯೋಜನೆಯಲ್ಲಿ ಒಂದು ವಿಶೇಷ ಸೌಲಭ್ಯವೂ ಇದೆ. ನೀವು ಸತತ 12 ತಿಂಗಳು ಠೇವಣಿ ಇಟ್ಟರೆ, ನಿಮ್ಮ ಒಟ್ಟು ಠೇವಣಿ ಮೊತ್ತದ 50% ವರೆಗೆ ಸಾಲ ಪಡೆಯಬಹುದು! ಈ ಸಾಲವನ್ನು ಒಂದೇ ಬಾರಿಗೆ ಅಥವಾ ಕಂತುಗಳಲ್ಲಿ ಮರುಪಾವತಿ ಮಾಡಬಹುದು. ಸಾಲದ ಮೇಲಿನ ಬಡ್ಡಿ ದರವು ಆರ್ ಡಿ ದರಕ್ಕಿಂತ 2% ಹೆಚ್ಚಾಗಿರುತ್ತೆ, ಅಂದ್ರೆ 8.7% ವರೆಗೂ ಇರಬಹುದು. ಆರ್ಥಿಕ ತುರ್ತು ಸಂದರ್ಭಗಳಲ್ಲಿ ಈ ಸಾಲ ಬಹಳ ಉಪಯುಕ್ತವಾಗುತ್ತದೆ.
ಗಮನಿಸಿ: ಪೋಸ್ಟ್ ಆಫೀಸ್ ಆರ್ ಡಿ ಯೋಜನೆ ಕುರಿತು ಮಾಹಿತಿ ದೃಷ್ಟಿಯಿಂದ ಮಾತ್ರ ಲೇಖನವನ್ನು ಪ್ರಕಟಿಸಲಾಗಿದೆ. ಇದು ನಾವು ಮಾಡುವ ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ಪರಿಣತರನ್ನು ಸಂಪರ್ಕಿಸಿ.



















