ಉಡುಪಿ : ಸಾಸ್ತಾನದಲ್ಲಿನ ಕೋಸ್ಟಲ್ ಪ್ಯಾರಡೈಸ್ ಹೊಟೇಲ್ ಎದುರು ನಡೆದ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ಪ್ರಕರಣವನ್ನು KCOCA ಕಾಯ್ದೆಯಡಿ ದಾಖಲಿಸಿ ಈಗಾಗಲೇ 7 ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ್ ಕೋಡಿಕೆರೆ ಮತ್ತು ಚೇತನ್ ಕುಲಾಲ್ ತಲೆಮರೆಸಿಕೊಂಡಿದ್ದು, ಇವರ ಪತ್ತೆಗೆ ಪೊಲೀಸರು 50,000 ರೂ. ಬಹುಮಾನ ಘೋಷಿಸಿದ್ದಾರೆ.
2025ರ ನವೆಂಬರ್ 19ರಂದು ನಡೆದ ಈ ಘಟನೆದಲ್ಲಿ ಸಿದ್ದಾಪುರ ನಿವಾಸಿ ಮೋಹನ ದಾಸ್ ಶೆಟ್ಟಿ ಅವರ ಪುತ್ರ ತೇಜಸ್ ಅವರನ್ನು ಅಪಹರಿಸಲಾಗಿತ್ತು. ಅಪಹರಣವು ಪ್ರಮುಖ ಆರೋಪಿ ಮನೋಜ್ ಕೋಡಿಕೆರೆ ಸೂಚನೆಯಂತೆ ನಡೆದಿದ್ದು, ಆರೋಪಿಗಳು ಕೋಟ್ಯಂತರ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಧಿತರು
ಬಳಿಕ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳು ಸಂಘಟಿತವಾಗಿ ಅಪರಾಧ ನಡೆಸಿರುವುದು ಪತ್ತೆಯಾದ ಹಿನ್ನೆಲೆ ಪ್ರಕರಣಕ್ಕೆ ಕೋಕಾ (KCOCA-2000) ಕಾಯ್ದೆ ಅನ್ವಯಿಸಲಾಗಿದೆ. ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ನೇತೃತ್ವದಲ್ಲಿ ತನಿಖೆ ನಡೆಸಿ, ದೇವಿ ಪ್ರಸಾದ್ ಶೆಟ್ಟಿ (33), ಸುಜಿತ್ (27), ಸುದೀಪ್ (22), ಶ್ರೀಷಾ ಆನಂದ ಶೆಟ್ಟಿ (35), ಮಿಥುನ್ ಕೈಕಂಬ (20), ಸುಹಾಸ್ (31) ಹಾಗೂ ಮನೋಜ್ ವಿ. ಕೊಟ್ಯಾನ್ (34) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ ಕೋಡಿಕೆರೆ (42) ಮತ್ತು ಚೇತನ್ ಪಡೀಲ್ (38) ಪರಾರಿಯಾಗಿದ್ದಾರೆ. ಮನೋಜ್ ವಿರುದ್ಧ ಮಂಗಳೂರು ನಗರದಲ್ಲಿ 18 ಮತ್ತು ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದು, ಚೇತನ್ ವಿರುದ್ಧ ಮಂಗಳೂರು ನಗರದಲ್ಲಿ 11 ಹಾಗೂ ಉಡುಪಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಾರಿಯಾಗಿರುವ ಆರೋಪಿಗಳ ಬಗ್ಗೆ ಮಾಹಿತಿ ಇದ್ದಲ್ಲಿ ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ (ಮೊಬೈಲ್: 9480805422) ಅವರನ್ನು ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ. ಮಾಹಿತಿ ನೀಡುವವರಿಗೆ 50,000 ನಗದು ಬಹುಮಾನ ಘೋಷಿಸಲಾಗಿದ್ದು, ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಇಳಿಕೆ!



















