ವಿಶ್ವದ ಅತ್ಯಂತ ಕಠಿಣ ಮೋಟಾರ್ ರೇಸ್‌ಗಳಲ್ಲಿ ಒಂದಾಗಿರುವ ಡಕಾರ್ ರ್ಯಾಲಿ ಪೂರ್ಣಗೊಳಿಸಿದ ಮೊದಲ ಭಾರತೀಯ ಚಾಲಕ ಎಂಬ ಹೆಗ್ಗಳಿಕೆಗೆ ಸಂಜಯ್ ಟಕಾಲೆ ಪಾತ್ರರಾಗಿದ್ದಾರೆ. ಈ ವರ್ಷ ಡಕಾರ್ ಕ್ಲಾಸಿಕ್ ಕ್ಲಾಸ್‌ನಲ್ಲಿ ಸ್ಪರ್ಧಿಸಿದ್ದ 56ರ ವರ್ಷದ ಅವರು ಸಹ ಚಾಲಕ ಮ್ಯಾಕ್ಸಿಮ್ ರೌಡ್ ಅವರೊಂದಿಗೆ ಟೊಯೊಟಾ ಲ್ಯಾಂಡ್ ಕ್ರೂಸರ್ ಎಚ್‌ಝಡ್ ಜೆ 78 ಕಾರು ಓಡಿಸಿದ್ದರು. ಅವರು ಎರಡು ವಾರಗಳ ಕಠಿಣ ರೇಸ್ ಮುಗಿಸಿ ಒಟ್ಟಾರೆ 18ನೇ ಸ್ಥಾನ ಪಡೆದುಕೊಂಡಿದ್ದಾರೆ.
ಟಕಾಲೆ ಮೂರು ದಶಕಗಳಿಂದ ವೃತ್ತಿಪರ ರೇಸಿಂಗ್ ಮಾಡುತ್ತಿದ್ದಾರೆ. 2013ರಲ್ಲಿ ಏಷ್ಯಾ ಪೆಸಿಫಿಕ್ ರ್ಯಾಲಿ ಚಾಂಪಿಯನ್‌ಶಿಪ್‌ನ(Asia Pacific Rally Championship) ಪ್ರೊಡಕ್ಷನ್ ಕಪ್ ಸೇರಿದಂತೆ ಭಾರತ ಮತ್ತು ವಿದೇಶಗಳಲ್ಲಿ 75ಕ್ಕೂ ಹೆಚ್ಚು ಟ್ರೋಫಿಗಳನ್ನು ಗೆದ್ದಿದ್ದಾರೆ. ಅವರು ಈಗ ತಮ್ಮ ಮುಕುಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಡಕಾರ್ ರ್ಯಾಲಿಯಲ್ಲಿ ಸ್ಪರ್ಧಿಸಿ ಕಾರಿನಲ್ಲಿ ರೇಸ್ ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅವರು ಫ್ರೆಂಚ್ ತಂಡ ಕಾಂಪಾಗ್ನಿ ಸಹರಿಯನ್ ತಾಂತ್ರಿಕ ಬೆಂಬಲದೊಂದಿಗೆ ಡಕಾರ್ ಕ್ಲಾಸಿಕ್ ತರಗತಿಗೆ ಪ್ರವೇಶಿಸಿದ್ದರು. ಈ ವಿಭಾಗ 2005ಕ್ಕಿಂತ ಹಿಂದೆ ತಯಾರಿಸಿದ ವಾಹನಗಳಿಗೆ ಮೀಸಲಾಗಿದೆ. ಇದು ಹೆಚ್ಚು ಸೂಕ್ತವಾದ ಪ್ರತ್ಯೇಕ ಮಾರ್ಗದಲ್ಲಿ ಚಲಿಸುತ್ತದೆ.
ಪ್ರತಿ ಹಂತವನ್ನು ವೇಗವಾಗಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿರುವ ಇತರ ತರಗತಿಗಳಿಗಿಂತ ಭಿನ್ನವಾಗಿ, ಡಕಾರ್ ಕ್ಲಾಸಿಕ್ ನಿಯಮಿತ ರ್ಯಾಲಿಯನ್ನು ಅನುಸರಿಸುತ್ತದೆ (ಸಾಮಾನ್ಯವಾಗಿ ಟೈಮ್-ಸ್ಪೀಡ್-ಡಿಸ್ಟೆನ್ಸ್ ಅಥವಾ ಟಿಎಸ್‌ಡಿ ಎಂದು ಕರೆಯಲಾಗುತ್ತದೆ). ಇಲ್ಲಿ, ಪ್ರತಿ ಹಂತವನ್ನು ನಿರ್ದಿಷ್ಟ ಸಮಯದಲ್ಲಿ ಮತ್ತು ನಿರ್ದಿಷ್ಟ ಸರಾಸರಿ ವೇಗದಲ್ಲಿ ಪೂರ್ಣಗೊಳಿಸಬೇಕು ಇದು ತನ್ನದೇ ಆದ ವಿಶಿಷ್ಟ ಸವಾಲು ಹೊಂದಿರುತ್ತದೆ.
ಹಂತ 1 ರ ಕೊನೆಯಲ್ಲಿ ಅವರು ಒಟ್ಟಾರೆಯಾಗಿ 37ನೇ ಸ್ಥಾನದಲ್ಲಿದ್ದರು. ಸ್ಥಿರವಾಗಿ ಮುನ್ನಡೆ ಸಾಧಿಸಿದರು. ಅಂತಿಮ ಹಂತದಲ್ಲಿ ಅಗ್ರ 5 ಸ್ಥಾನಗಳನ್ನು ಗಳಿಸಿದ್ದರು. ಒಟ್ಟಾರೆಯಾಗಿ 18ನೇ ಸ್ಥಾನ ಗಳಿಸಿದರು.