ಅಹಮದಾಬಾದ್ : 2026ರ ಟಿ20 ವಿಶ್ವಕಪ್‌ನ ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅನುಭವಿಸಿದ 76 ರನ್‌ಗಳ ಹೀನಾಯ ಸೋಲು ಭಾರತೀಯ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮುಖ್ಯವಾಗಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತಂತ್ರಗಾರಿಕೆ ಮತ್ತು ಆಟಗಾರರ ಆಯ್ಕೆಯ ಬಗ್ಗೆ ಈಗ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕ್ರಿಕೆಟ್ ನೆಕ್ಸ್ಟ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಮಂಜ್ರೇಕರ್, ಗಂಭೀರ್ ಅವರ ತಂತ್ರಗಾರಿಕೆಯನ್ನು ಹಳೆಯ ಕಾಲದ ‘ಕೈಲಾಸ್ ಜೀವನ್’ ಎಂಬ ಆಯುರ್ವೇದ ಔಷಧಿಗೆ ಹೋಲಿಸಿ ಲೇವಡಿ ಮಾಡಿದ್ದಾರೆ. “ಹಿಂದೆ ಕೈಲಾಸ್ ಜೀವನ್ ಎಂಬ ಒಂದು ಔಷಧ ಇತ್ತು. ತಲೆನೋವು ಬಂದರೆ ಅದನ್ನೇ ಹಚ್ಚಬೇಕು, ಹೊಟ್ಟೆನೋವು ಬಂದರೆ ಅದನ್ನೇ ಕುಡಿಯಬೇಕು. ಅಂದರೆ ಎಲ್ಲದಕ್ಕೂ ಅದು ಒಂದೇ ಪರಿಹಾರವಾಗಿತ್ತು. ಈಗ ಗೌತಮ್ ಗಂಭೀರ್ ಅವರಿಗೂ ವಾಷಿಂಗ್ಟನ್ ಸುಂದರ್ ಅದೇ ರೀತಿ ಕಾಣುತ್ತಿದ್ದಾರೆ. ಬ್ಯಾಟಿಂಗ್ ಸಮಸ್ಯೆಯಿದ್ದರೆ ಸುಂದರ್ ಅವರನ್ನೇ ಕಳುಹಿಸುವುದು, ಬೌಲಿಂಗ್ ಸಮಸ್ಯೆಯಿದ್ದರೆ ಅವರ ಕೈಗೇ ಚೆಂಡು ನೀಡುವುದು. ಗಂಭೀರ್ ಅವರ ಈ ‘ಆಲ್-ಇನ್-ಒನ್’ ಪರಿಹಾರ ತಂಡಕ್ಕೆ ಮುಳುವಾಗುತ್ತಿದೆ,” ಎಂದು ಮಂಜ್ರೇಕರ್ ಚುಚ್ಚಿದ್ದಾರೆ.
ಅಕ್ಷರ್ ಪಟೇಲ್ ನಿರ್ಲಕ್ಷ್ಯಕ್ಕೆ ಕಿಡಿ
ದಕ್ಷಿಣ ಆಫ್ರಿಕಾ ತಂಡದಲ್ಲಿ ಮೂವರು ಎಡಗೈ ಬ್ಯಾಟರ್‌ಗಳಿದ್ದಾರೆ (ಡಿ ಕಾಕ್, ರಿಕಲ್ಟನ್, ಮತ್ತು ಮಿಲ್ಲರ್) ಎಂಬ ಕಾರಣಕ್ಕೆ ಅಕ್ಷರ್ ಪಟೇಲ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಲಾಗಿತ್ತು. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಮಂಜ್ರೇಕರ್, “ಅಕ್ಷರ್ ಪಟೇಲ್ ತಂಡದ ಉಪನಾಯಕ. ಅವರ ದಾಖಲೆಗಳು ಎಡಗೈ ಬ್ಯಾಟರ್‌ಗಳ ವಿರುದ್ಧವೂ ಚೆನ್ನಾಗಿವೆ. ಅಂತಹ ಆಟಗಾರನನ್ನು ಕೈಬಿಟ್ಟು ಸುಂದರ್ ಅವರನ್ನು ಆಡಿಸಿದ್ದು ಮತ್ತು ಅವರನ್ನು ಹಾರ್ದಿಕ್ ಪಾಂಡ್ಯ ಹಾಗೂ ರಿಂಕು ಸಿಂಗ್ ಅವರಿಗಿಂತ ಮೊದಲೇ ಬ್ಯಾಟಿಂಗ್‌ಗೆ ಕಳುಹಿಸಿದ್ದು ತಪ್ಪು ನಿರ್ಧಾರ,” ಎಂದು ವಿಶ್ಲೇಷಿಸಿದ್ದಾರೆ.
ಅತ್ಯಂತ ಆಶ್ಚರ್ಯವೆಂದರೆ, ಎಡಗೈ ಬ್ಯಾಟರ್‌ಗಳ ‘ಮ್ಯಾಚ್-ಅಪ್’ಗಾಗಿ ಸುಂದರ್ ಅವರನ್ನು ಆರಿಸಿದ್ದರೂ ಸಹ, ಅವರಿಗೆ ನೀಡಿದ್ದು ಕೇವಲ ಎರಡು ಓವರ್‌ಗಳು ಮಾತ್ರ.
ಭಾರತದ ಬ್ಯಾಟಿಂಗ್ ವೈಫಲ್ಯ ಮತ್ತು ಒತ್ತಡ
ದಕ್ಷಿಣ ಆಫ್ರಿಕಾ ನೀಡಿದ 188 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 111 ರನ್‌ಗಳಿಗೆ ಆಲೌಟ್ ಆಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಮಂಜ್ರೇಕರ್, “ದಕ್ಷಿಣ ಆಫ್ರಿಕಾ ತಂಡ 20ಕ್ಕೆ 3 ವಿಕೆಟ್ ಕಳೆದುಕೊಂಡಾಗಲೂ ಜವಾಬ್ದಾರಿಯುತವಾಗಿ ಆಡಿ ಚೇತರಿಸಿಕೊಂಡಿತು. ಆದರೆ ಭಾರತದ ಬ್ಯಾಟರ್‌ಗಳು ಒತ್ತಡದ ಸಮಯದಲ್ಲಿ ಕನಿಷ್ಠ ಹೋರಾಟವನ್ನೂ ತೋರದೆ ಶರಣಾದರು,” ಎಂದು ಟೀಕಿಸಿದ್ದಾರೆ.
ಜಿಂಬಾಬ್ವೆ ಪಂದ್ಯ: ಸಂಜು ಸ್ಯಾಮ್ಸನ್ ಎಂಟ್ರಿ?
ಕುಟುಂಬದ ತುರ್ತು ಪರಿಸ್ಥಿತಿಯಿಂದಾಗಿ ರಿಂಕು ಸಿಂಗ್ ಮನೆಗೆ ಮರಳಿದ್ದಾರೆ. ಹೀಗಾಗಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಂಡ ಸೇರುವ ಸಾಧ್ಯತೆಯಿದೆ. ಚೆನ್ನೈನ ಚೀಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ ಕೂಡ ಮರಳಲಿದ್ದಾರೆ ಎನ್ನಲಾಗಿದೆ.
ಭಾರತ ಈಗ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಸೆಮಿಫೈನಲ್ ಪ್ರವೇಶಿಸಬೇಕಾದರೆ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಬೃಹತ್ ಅಂತರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಇದನ್ನೂ ಓದಿ : ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ | ಸಿಸಿಟಿವಿಯಲ್ಲಿ ದೃಶ್ಯ ಸೆರೆ



















