ಬೆಂಗಳೂರು: ಜನಸಂದಣಿ ಪ್ರದೇಶದಲ್ಲಿ ತಿರುಗಾಡುವಾಗಲೋ ಜೇಬಿನಿಂದ ಮೊಬೈಲ್ ಬಿದ್ದಿರುತ್ತದೆ. ಅದು ಇನ್ನಾರದ್ದೋ ಕೈಗೆ ಸಿಕ್ಕು, ಅವರು ಅದನ್ನು ಸ್ವಿಚ್ಡ್ ಆಫ್ ಮಾಡ್ತಾರೆ. ಇನ್ನು, ಗದ್ದಲದ ಮಧ್ಯೆಯೇ ಕಳ್ಳನು ನಮ್ಮ ಜೇಬಿನಿಂದ ಮೊಬೈಲ್ ಎಗರಿಸಿರುತ್ತಾನೆ. ಹೀಗೆ ಮೊಬೈಲ್ ಕಳೆದುಹೋದ ಬಳಿಕ ಹಲವು ಕ್ರಮಗಳನ್ನು ಅನುಸರಿಸಿದರೆ, ಸಂಚಾರ ಸಾಥಿ ಎಂಬ ಪೋರ್ಟಲ್ ಗೆ ಭೇಟಿ ನೀಡಿ, ಅಗತ್ಯ ಮಾಹಿತಿ ಒದಗಿಸಿದರೆ, ನಮಗೆ ವಾಪಸ್ ಮೊಬೈಲ್ ಸಿಗುವ ಸಾಧ್ಯತೆ ಇರುತ್ತದೆ. ಹಾಗಾದ್ರೆ, ಮೊಬೈಲ್ ಕಳೆದ ಕೂಡಲೇ ಏನು ಮಾಡಬೇಕು? ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಗೈಡ್.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ
ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ ಗೆ ಸಂಬಂಧಿಸಿದಂತೆ ನಿಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಬೇಕು. ಮೊಬೈಲ್ ಹೇಗೆ ಕಳೆಯಿತು, ಅದರ ಐಎಂಇಐ ನಂಬರ್ ಏನು ಎಂಬುದು ಸೇರಿ ವಿವಿಧ ಮಾಹಿತಿ ಒದಗಿಸಬೇಕು.
ಸಂಚಾರ ಸಾಥಿ ಪೋರ್ಟಲ್ ಗೆ ನೋಂದಾಯಿಸಿ
ಮೊಬೈಲ್ ಕಳೆದುಹೋದ ಬಳಿಕ ಮೊದಲು ಪೊಲೀಸ್ ಠಾಣೆಗೆ ದೂರು ನೀಡಬೇಕು. ದೂರು ನೀಡಿದ ನಂತರ ಸಂಚಾರ ಸಾಥಿ ವೆಬ್ ಸೈಟ್ ಆಗಿರುವ https://www.ceir.gov.in ಗೆ ಭೇಟಿ ನೀಡಬೇಕು. ಅಲ್ಲಿ, ಕಳೆದು ಹೋದ ಮೊಬೈಲ್ ಅನ್ನು ನಿರ್ಬಂಧಿಸಬೇಕು. ಪೊಲೀಸರಿಗೆ ನೀಡಿದ ದೂರಿನ ಸಂಖ್ಯೆ, ಐಎಂಇಐ ನಂಬರ್, ಆಧಾರ್ ಲಿಂಕ್ ಮಾಡಲಾದ ವಿಳಾಸ, ಪರ್ಯಾಯ ಮೊಬೈಲ್ ನಂಬರ್ ನೀಡಬೇಕು.
ಪೋರ್ಟಲ್ ನಲ್ಲಿ ನೀವು ನೋಂದಾಯಿಸಿದ ನಂತರ, ತಂತ್ರಾಂಶವು ದೇಶಾದ್ಯಂತ ಸಂಬಂಧಪಟ್ಟ ಇಲಾಖೆ, ಸೈಬರ್ ಅಪರಾಧ ತಂಡಗಳು ಮತ್ತು ಟೆಲಿಕಾಂ ಪೂರೈಕೆದಾರರಿಗೆ ಅಲರ್ಟ್ ನೀಡುತ್ತದೆ. ಇದರಿಂದ ಮೊಬೈಲ್ ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ನಕಲಿ ಸಿಮ್ ಪಡೆಯಿರಿ
ಮೊಬೈಲ್ ಕಳೆದುಹೋದ ಕೂಡಲೇ ಹಳೆಯ ನಂಬರ್ ಬ್ಲಾಕ್ ಮಾಡಿಸಿ. ಅಗತ್ಯ ದಾಖಲೆಗಳನ್ನು ಟೆಲಿಕಾಂ ಸೇವಾ ಪೂರೈಕೆದಾರರಿಗೆ ನೀಡುವ ಮೂಲಕ ಅದೇ ನಂಬರ್ ನ ಸಿಮ್ ಪಡೆಯಿರಿ. ಸಿಮ್ ಹಾಗೆಯೇ ಬಿಟ್ಟರೆ, ಅದರಿಂದಲೂ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.