ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸಿಕಂದರ್ ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಈದ್ ಹಬ್ಬದ ಸಂಭ್ರಮದ ಮಧ್ಯೆಯೇ ಮಾರ್ಚ್ 30ರಂದು ಸಿಕಂದರ್ ಸಿನಿಮಾ ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ಲೇ, ಕೆಲ ಫೋಟೋಗಳನ್ನು ಸಲ್ಮಾನ್ ಖಾನ್ ಪೋಸ್ಟ್ ಮಾಡಿದ್ದು, ಅಭಿಮಾನಿಗಳಿಗೆ ಸಿನಿಮಾ ವೀಕ್ಷಿಸುವಂತೆ ಕರೆ ನೀಡಿದ್ದಾರೆ. ಅಲ್ಲದೆ, ಕೈಯಲ್ಲಿ ರಾಮಮಂದಿರ ಫೋಟೋ ಇರುವ ಗಡಿಯಾರ ಕಟ್ಟಿರುವ ಫೋಟೋಗಳು ಆಕರ್ಷಿಸಿವೆ.
ಹೌದು, ಈದ್ ಹಬ್ಬದ ಸಂಭ್ರಮದ ಮಧ್ಯೆಯೇ ಸಲ್ಮಾನ್ ಖಾನ್ ಅವರು ರಾಮಜನ್ಮಭೂಮಿ ಎಡಿಷನ್ ನ ವಾಚ್ ಧರಿಸುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮಮಂದಿರವನ್ನು ಉದ್ಘಾಟನೆ ಮಾಡಿದ ಸವಿನೆನಪಿಗೆ ನಿಯಮಿತ ವಾಚ್ ಗಳನ್ನು ತಯಾರಿಸಲಾಗಿದೆ.

ವಾಚ್ ನಲ್ಲಿ ರಾಮಮಂದಿರ, ರಾಮ, ಹನುಮಂತನ ಫೋಟೋಗಳು ಇವೆ. ಜೈಶ್ರೀರಾಮ್ ಎಂದು ಕೂಡ ಬರೆಯಲಾಗಿದೆ. ಈ ಗಡಿಯಾರವನ್ನು ಸಲ್ಮಾನ್ ಖಾನ್ ಅವರು ಧರಿಸಿ, ಫೋಟೊ ತೆಗೆಸಿಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ರಂಜಾನ್ ಮಾಸದ ವೇಳೆಯೂ ರಾಮಮಂದಿರ ಫೋಟೋ ಇರುವ ಗಡಿಯಾರ ಧರಿಸುವ ಮೂಲಕ ಸಲ್ಮಾನ್ ಖಾನ್ ಅವರು ಸೌಹಾರ್ದತೆಯ ಸಂದೇಶ ರವಾನಿಸಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಾಚ್ ಬೆಲೆ ಎಷ್ಟು ಗೊತ್ತಾ?
ಜೇಕಬ್ ಆ್ಯಂಡ್ ಕೋ ಎಂಬ ಕಂಪನಿಯು ರಾಮಜನ್ಮಭೂಮಿ ಎಡಿಷನ್ ನ ಗಡಿಯಾರಗಳನ್ನು ತಯಾರಿಸಿದೆ. ಇವುಗಳು ತುಂಬ ದುಬಾರಿಯಾಗಿದ್ದು, ಸಲ್ಮಾನ್ ಖಾನ್ ಅವರು ಧರಿಸಿದ್ದ ಗಡಿಯಾರದ ಬೆಲೆಯು 34 ಲಕ್ಷ ರೂಪಾಯಿ ಇದೆ ಎಂದು ತಿಳಿದುಬಂದಿದೆ. ಎರಡು ತಿಂಗಳ ಹಿಂದಷ್ಟೇ ಇದೇ ಮಾದರಿಯ ಗಡಿಯಾರವನ್ನು ಅಭಿಷೇಕ್ ಬಚ್ಚನ್ ಅವರು ಧರಿಸಿದ್ದರು.