ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಮಿಂಚಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ಮಹಾರಾಷ್ಟ್ರ ಮತ್ತು ಸರ್ವಿಸಸ್ ತಂಡಗಳು ಮುಖಾಮುಖಿಯಾಗಿದ್ದವು. ಮಹಾರಾಷ್ಟ್ರ ತಂಡದ ನಾಯಕನಾಗಿರುವ ರುತುರಾಜ್ ಗಾಯಕ್ವಾಡ್ ತಂಡಕ್ಕೆ ಏಕಪಕ್ಷೀಯವಾಗಿ ಗೆಲುವಿನ ಸಿಹಿ ನೀಡಿದರು.
ಉಭಯ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ರುತುರಾಜ್ ಗಾಯಕ್ವಾಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿದ್ದರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಸರ್ವಿಸಸ್ ತಂಡ ಕೇವಲ 48 ಓವರ್ ಗಳಲ್ಲಿ 204 ರನ್ ಗಳಿಸಿ ಆಲೌಟ್ ಆಯಿತು.
ಸರ್ವಿಸಸ್ ತಂಡದ ನಾಯಕ ಮೋಹಿತ್ ಅಹ್ಲಾವತ್ ಗರಿಷ್ಠ 61 ರನ್ ಗಳಿಸಿ ಮಿಂಚಿದ್ದರು. ಮಹಾರಾಷ್ಟ್ರ ತಂಡದ ಪರ ಪ್ರದೀಪ್ ದಾಧೆ ಮತ್ತು ಸತ್ಯಜಿತ್ ಬಚಾವ್ ತಲಾ 3 ವಿಕೆಟ್ ಪಡೆದರು.
205 ರನ್ ಗಳ ಗುರಿ ಪಡೆದಿದ್ದ ಮಹಾರಾಷ್ಟ್ರ ತಂಡಕ್ಕೆ ರುತುರಾಜ್ ಗಾಯಕ್ವಾಡ್ ಆಸರೆಯಾಗಿ ನಿಂತರು. 74 ಎಸೆತಗಳಲ್ಲಿ ಅಜೇಯ 148 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ವೇಳೆ ಗಾಯಕ್ವಾಡ್ 16 ಬೌಂಡರಿ ಮತ್ತು 11 ಸಿಕ್ಸರ್ ಸಿಡಿಸಿದ್ದರು. ಪರಿಣಾಮ ಕೇವಲ 20.2 ಓವರ್ ಗಳಲ್ಲಿಯೇ ಜಯದ ನಗೆ ಬೀರುವಂತೆ ಮಾಡಿದರು.