ಮಾಸ್ಕೋ: ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಮುಂದುವರಿದಿರುವಂತೆಯೇ, ಈ ಸಂಘರ್ಷದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರಷ್ಯಾವು ಇದೇ ಮೊದಲ ಬಾರಿಗೆ ಸಮುದ್ರ ಡ್ರೋನ್ ಬಳಸಿ, ಉಕ್ರೇನ್ ನೌಕಾಪಡೆಯ ಅತಿದೊಡ್ಡ ಹಡಗು ಎಂದೇ ಹೆಸರಾದ ‘ಸಿಮ್ಫೆರೋಪೋಲ್’ ಅನ್ನು ನಾಶ ಮಾಡಿದೆ. ರಷ್ಯಾದ ರಕ್ಷಣಾ ಸಚಿವಾಲಯವೇ ಈ ಕುರಿತು ಮಾಹಿತಿ ನೀಡಿದೆ.
ರೇಡಿಯೋ, ಎಲೆಕ್ಟ್ರಾನಿಕ್, ರಾಡಾರ್ ಮತ್ತು ಆಪ್ಟಿಕಲ್ ಗೂಢಚರ್ಯೆಗಾಗಿ ವಿನ್ಯಾಸಗೊಳಿಸಲಾದ ‘ಲಗುನಾ-ಕ್ಲಾಸ್’ ಮಾದರಿಯ ಮಧ್ಯಮ ಗಾತ್ರದ ಹಡಗು ಇದಾಗಿದೆ. ಉಕ್ರೇನ್‌ನ ಒಡೆಸ್ಸಾ ಪ್ರದೇಶದಲ್ಲಿರುವ ಡ್ಯಾನ್ಯೂಬ್ ನದಿಯ ಮುಖಜ ಭೂಮಿಯಲ್ಲಿ ಈ ಹಡಗನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಟಿಎಎಸ್ಎಸ್ ವರದಿಯ ಪ್ರಕಾರ, ಉಕ್ರೇನ್ ನೌಕಾಪಡೆಯ ಹಡಗನ್ನು ಹೊಡೆದುರುಳಿಸಲು ರಷ್ಯಾವು ಸಮುದ್ರ ಡ್ರೋನ್ ಅನ್ನು ಯಶಸ್ವಿಯಾಗಿ ಬಳಸಿರುವುದು ಇದೇ ಮೊದಲು.
ದಾಳಿ ಖಚಿತಪಡಿಸಿದ ಉಕ್ರೇನ್:
ಉಕ್ರೇನ್ ಅಧಿಕಾರಿಗಳು ತಮ್ಮ ಹಡಗಿನ ಮೇಲೆ ದಾಳಿ ನಡೆದಿರುವುದನ್ನು ಖಚಿತಪಡಿಸಿದ್ದಾರೆ. ಉಕ್ರೇನ್ ನೌಕಾಪಡೆಯ ವಕ್ತಾರರನ್ನು ಉಲ್ಲೇಖಿಸಿ ‘ಕೈವ್ ಇಂಡಿಪೆಂಡೆಂಟ್’ ವರದಿ ಮಾಡಿರುವಂತೆ, ಈ ದಾಳಿಯಲ್ಲಿ ಒಬ್ಬ ಸಿಬ್ಬಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. “ದಾಳಿಯ ನಂತರದ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳು ಭರದಿಂದ ಸಾಗಿದೆ. ಬಹುತೇಕ ಸಿಬ್ಬಂದಿ ಸುರಕ್ಷಿತವಾಗಿದ್ದು, ನಾಪತ್ತೆಯಾದ ಕೆಲವು ನಾವಿಕರಿಗಾಗಿ ಶೋಧ ಕಾರ್ಯ ಮುಂದುವರೆದಿದೆ” ಎಂದು ವಕ್ತಾರರು ತಿಳಿಸಿದ್ದಾರೆ.
ಯಾವುದಿದು ಹಡಗು?:
‘ಸಿಮ್ಫೆರೋಪೋಲ್’ ಹಡಗನ್ನು 2019ರಲ್ಲಿ ನಿರ್ಮಿಸಲಾಗಿದ್ದು, ಎರಡು ವರ್ಷಗಳ ನಂತರ, ಅಂದರೆ 2021 ರಲ್ಲಿ ಅದನ್ನು ಉಕ್ರೇನ್ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿತ್ತು. ‘ವಾರ್‌ಗೊಂಜೊ ಟೆಲಿಗ್ರಾಮ್’ ಚಾನೆಲ್ ಪ್ರಕಾರ, 2014 ರ ನಂತರ ಉಕ್ರೇನ್ ನಿರ್ಮಿಸಿದ ಅತಿದೊಡ್ಡ ಹಡಗು ಇದಾಗಿತ್ತು.
ರಷ್ಯಾ ದಾಳಿ ತೀವ್ರ:
ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾವು ನೌಕಾ ಡ್ರೋನ್‌ಗಳು ಸೇರಿದಂತೆ ಇತರೆ ಮಾನವರಹಿತ ವ್ಯವಸ್ಥೆಗಳ ಉತ್ಪಾದನೆಯನ್ನು ತೀವ್ರಗೊಳಿಸಿದೆ. ಇದಲ್ಲದೆ, ಗುರುವಾರ ರಾತ್ರಿ ಕೀವ್‌ನಲ್ಲಿದ್ದ ಪ್ರಮುಖ ಡ್ರೋನ್ ಉತ್ಪಾದನಾ ಘಟಕದ ಮೇಲೆ ರಷ್ಯಾ ಎರಡು ಕ್ಷಿಪಣಿ ದಾಳಿಗಳನ್ನು ನಡೆಸಿದೆ ಎಂದು ಉಕ್ರೇನ್ ರಾಜಕಾರಣಿ ಇಗೊರ್ ಜಿಂಕೆವಿಚ್ ಹೇಳಿದ್ದಾರೆ. ಈ ಘಟಕದಲ್ಲಿ ಟರ್ಕಿಯ ‘ಬೈರಕ್ತಾರ್’ ಡ್ರೋನ್‌ಗಳನ್ನು ಉತ್ಪಾದಿಸಲು ಸಿದ್ಧತೆ ನಡೆಸಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.



















