ಬೆಂಗಳೂರು: ಷೇರು ಮಾರುಕಟ್ಟೆಯು ಯಾವಾಗಲೂ ಏರಿಳಿತಗಳಿಂದ ಕೂಡಿರುತ್ತದೆ. ಇದರಿಂದಾಗಿ ಹೊಸದಾಗಿ ಹೂಡಿಕೆ ಮಾಡುವವರಿಗೆ ಭಯವಾಗುತ್ತದೆ. ಮ್ಯೂಚುವಲ್ ಫಂಡ್ ಗಳು ಕೂಡ ರಿಸ್ಕ್ ನಿಂದ ಕೂಡಿರುತ್ತವೆ. ಹಾಗಾಗಿ, ಹೆಚ್ಚಿನ ಜನ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಹೀಗೆ ಪೋಸ್ಟ್ ಆಫೀಸಿನ ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಮಾಸಿಕ ಆದಾಯ ಯೋಜನೆ (Post Office Monthly Income Scheme) ಕೂಡ ಒಂದಾಗಿದೆ.
ಹೌದು, ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯು ಸುರಕ್ಷಿತವಾಗಿದ್ದು, ಮಾರುಕಟ್ಟ ಏರಿಳಿತಗಳಿಂದ ಕೂಡಿಲ್ಲ. ಹೂಡಿಕೆಗೆ ನಿಶ್ಚಿತ ಆದಾಯ ತರುವ ಯೋಜನೆ ಇದಾಗಿದೆ. ಮಾಸಿಕ ಆದಾಯ ಯೋಜನೆ ಅಡಿಯಲ್ಲಿ ನೀವೇನಾದರೂ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಶೇ.7.4ರ ಬಡ್ಡಿದರದಲ್ಲಿ ತಿಂಗಳಿಗೆ 616 ರೂಪಾಯಿ ಬಡ್ಡಿಯ ಲಾಭ ಲಭಿಸುತ್ತದೆ. ನೀವೇನಾದರೂ, 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಮಾಸಿಕ 3,083 ರೂಪಾಯಿ ಬಡ್ಡಿ ಗಳಿಸಬಹುದು.
5,550 ರೂ. ಗಳಿಸೋದು ಹೇಗೆ?
ಪೋಸ್ಟ್ ಆಫೀಸಿನಲ್ಲಿ ಒಬ್ಬ ವ್ಯಕ್ತಿಯು ಗರಿಷ್ಠ 9 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಜಂಟಿಯಾಗಿ ಖಾತೆ ತೆರೆದರೆ 15 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ನೀವೇನಾದರೂ 9 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಶೇ.7.4ರ ಬಡ್ಡಿದರದಲ್ಲಿ ತಿಂಗಳಿಗೆ 5,550 ರೂಪಾಯಿ ಗಳಿಸಬಹುದು. ಪ್ರತಿ ತಿಂಗಳು ನಿಮ್ಮ ಖಾತೆಗೆ ಬಡ್ಡಿಯ ಲಾಭವನ್ನು ಜಮೆ ಮಾಡಲಾಗುತ್ತದೆ.
ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮಗೆ 5 ವರ್ಷಗಳ ಲಾಕ್ ಇನ್ ಪೀರಿಯಡ್ ಇರುತ್ತದೆ. ಇದರ ಮಧ್ಯೆಯೂ ತುರ್ತು ಸಂದರ್ಭಗಳಲ್ಲಿ ಹಣ ವಿತ್ ಡ್ರಾ ಮಾಡಬಹುದಾಗಿದೆ. ಹಾಗೆಯೇ, ನೀವು ಮಾಡಿದ ಹೂಡಿಕೆಗೆ ಪ್ರತಿ ತಿಂಗಳು ಬಡ್ಡಿಯ ಲಾಭವನ್ನು ಪಡೆಯಬಹುದಾಗಿದೆ. ಕನಿಷ್ಠ 1 ಸಾವಿರ ರೂಪಾಯಿಯಿಂದ ಬೇಕಾದರೂ ಹೂಡಿಕೆ ಮಾಡಬಹುದಾಗಿದೆ.
ವಿಶೇಷ ಸೂಚನೆ: ನಾವು ಅಂಚೆ ಕಚೇರಿಯ ಮಾಸಿಕ ಆದಾಯದ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಈ ಲೇಖನವನ್ನು ಪ್ರಕಟಿಸಿದ್ದೇವೆ. ಇದು ಹೂಡಿಕೆಗೆ ನಾವು ಮಾಡುವ ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮುನ್ನ ತಜ್ಞರನ್ನು ಸಂಪರ್ಕಿಸಿ.