ಗುವಾಹಟಿ: ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಅಸ್ಸಾಂ ನಾಗರಿಕ ಸೇವೆಗಳ (ACS) ಅಧಿಕಾರಿಯೊಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮುಖ್ಯಮಂತ್ರಿಗಳ ವಿಶೇಷ ವಿಚಕ್ಷಣಾ ದಳದ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಮಹಿಳಾ ಅಧಿಕಾರಿಯ ಮನೆಯಲ್ಲಿ ಬರೋಬ್ಬರಿ 2 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗೋಲಘಾಟ್ ನಿವಾಸಿ ಮತ್ತು ಪ್ರಸ್ತುತ ಕಾಮರೂಪ್ ಜಿಲ್ಲೆಯ ಸರ್ಕಲ್ ಅಧಿಕಾರಿಯಾಗಿರುವ ನೂಪುರ್ ಬೋರಾ ಅವರ ನಿವಾಸದ ಮೇಲೆ ಈ ದಾಳಿ ನಡೆದಿದ್ದು, ಸುಮಾರು 92 ಲಕ್ಷ ರೂಪಾಯಿ ನಗದು ಮತ್ತು ಒಂದು ಕೋಟಿ ರೂಪಾಯಿ ಮೌಲ್ಯದ ಆಭರಣಗಳು ಪತ್ತೆಯಾಗಿವೆ. ಅಲ್ಲದೆ, ಬಾರ್ಪೇಟಾದಲ್ಲಿರುವ ಅವರ ಬಾಡಿಗೆ ಮನೆಯಲ್ಲಿ 10 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2019ರಲ್ಲಿ ಅಸ್ಸಾಂ ನಾಗರಿಕ ಸೇವೆಗೆ ಸೇರಿದ್ದ ನೂಪುರ್ ಬೋರಾ, ಭೂ ವ್ಯವಹಾರಗಳಿಗೆ ಸಂಬಂಧಿಸಿದ ವಿವಾದಗಳಲ್ಲಿ ಭಾಗಿಯಾಗಿದ್ದಾರೆಂಬ ದೂರಿನ ಮೇರೆಗೆ ಕಳೆದ ಆರು ತಿಂಗಳಿಂದ ನಿಗಾದಲ್ಲಿದ್ದರು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಹಿಮಂತ, “ಬಾರ್ಪೇಟಾ ಕಂದಾಯ ವೃತ್ತದಲ್ಲಿ ಅಧಿಕಾರಿಯಾಗಿದ್ದಾಗ ಈ ಅಧಿಕಾರಿ ಹಿಂದೂಗಳ ಭೂಮಿಯನ್ನು ಅಕ್ರಮವಾಗಿ ಇತರ ವ್ಯಕ್ತಿಗಳಿಗೆ ಹಣಕ್ಕಾಗಿ ವರ್ಗಾಯಿಸಿದ್ದರು. ನಾವು ಈ ಸಂಬಂಧ ಕಠಿಣ ಕ್ರಮ ಕೈಗೊಂಡಿದ್ದೇವೆ,” ಎಂದು ಹೇಳಿದ್ದಾರೆ. ಅಲ್ಲದೆ, ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳ ಕಂದಾಯ ವೃತ್ತಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
ವಿಶೇಷ ವಿಚಕ್ಷಣಾ ದಳವು ನೂಪುರ್ ಬೋರಾ ಅವರ ಆಪ್ತ ಸಹಾಯಕನೆಂದು ಹೇಳಲಾದ ಲಟ್ ಮಂಡಲ್ ಸುರಜಿತ್ ಢೇಕಾ ಅವರ ನಿವಾಸದ ಮೇಲೂ ದಾಳಿ ನಡೆಸಿದೆ. ನೂಪುರ್ ಬೋರಾ ಅವರು ಬಾರ್ಪೇಟಾದಲ್ಲಿ ಸರ್ಕಲ್ ಅಧಿಕಾರಿಯಾಗಿದ್ದಾಗ, ಸುರಜಿತ್ ಢೇಕಾ ಅವರ ಸಹಯೋಗದೊಂದಿಗೆ ಅಕ್ರಮವಾಗಿ ಅನೇಕ ಭೂಮಿಗಳನ್ನು ಸಂಪಾದಿಸಿದ್ದಾರೆ ಎಂಬ ಆರೋಪವಿದೆ.