ತುಮಕೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ ಕೂಗಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಶಾಸಕ ಸುರೇಶಗೌಡ ಘೋಷಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಡಿ. 2ರಂದು ತುಮಕೂರಿಗೆ ಭೇಟಿ ನೀಡಲಿದ್ದು, 1.4 ಲಕ್ಷ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸುವುದರೊಂದಿಗೆ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಸಿಎಂಗೆ ಬಾವುಟ ಪ್ರದರ್ಶಿಸಿ ‘ಗೋ ಬ್ಯಾಕ್ ಸಿದ್ದರಾಮಯ್ಯ’ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಈ ವೇಳೆ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದರೆ 1ಲಕ್ಷ ಬಹುಮಾನ ಕೊಡುವುದಾಗಿ ಶಾಸಕರು ಘೋಷಿಸಿದ್ದಾರೆ.
ನನ್ನ ಕ್ಷೇತ್ರದ ಪ್ರತಿಯೊಂದು ಗ್ರಾಪಂಗಳಿಗೆ ಬಸ್ ಕಳುಹಿಸುತ್ತೇನೆ. ಎಲ್ಲರೂ ಸೇರಿ ಹೋರಾಟ ಮಾಡಬೇಕು. ಸಿಎಂ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಕಪ್ಪು ಬಾವುಟ ತೋರಿಸಬೇಕು. ಅಲ್ಲದೇ ಸಮಾವೇಶದಲ್ಲಿ ಧಿಕ್ಕಾರ ಕೂಗಿದವರಿಗೆ 1 ಲಕ್ಷ ಬಹುಮಾನ ನೀಡುತ್ತೇನೆ ಎಂದಿದ್ದಾರೆ.
ಶಾಸಕರ ಈ ನಿರ್ಧಾರಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇನಾ ನಿಮ್ಮ ಸಂಸ್ಕೃತಿ? ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ.