33ನೇ ಟೆಸ್ಟ್ ಶತಕ ಸಿಡಿಸಿ ದಾಖಲೆ ಬರೆದ ರೂಟ್!
ಲಂಡನ್: ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಟೆಸ್ಟ್ ಅಂಗಳದಲ್ಲಿ ದಾಖಲೆ ಬರೆದಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ 33ನೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನದಾಟದಲ್ಲಿ ಮಾಜಿ ನಾಯಕ ಅಲಸ್ಟೈರ್ ಕುಕ್ ಅವರ ಟೆಸ್ಟ್ ಶತಕಗಳ ದಾಖಲೆ ಸರಿಗಟ್ಟಿ ಇತಿಹಾಸ ಬರೆದಿದ್ದಾರೆ. ಈ ಮೂಲಕ ಇಂಗ್ಲೆಂಡ್ ಪರ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದ ದಾಖಲೆ ಸಮವಾಗಿಸಿಕೊಂಡಿದ್ದಾರೆ.
ಅಲ್ಲದೇ, ಇದು ಅಂತಾರಾಷ್ಟ್ರೀಯ ವೃತ್ತಿ ಬದುಕಿನಲ್ಲಿ ರೂಟ್ ಬಾರಿಸಿರುವ 49ನೇ ಶತಕ ಇದಾಗಿದೆ. ಈ ಮೂಲಕ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ 48 ಅಂತಾರಾಷ್ಟ್ರೀಯ ಶತಕದ ದಾಖಲೆಯನ್ನು ಮುರಿದಿದ್ದಾರೆ.
ಹಾಲಿ ಕ್ರಿಕೆಟಿಗರ ಪೈಕಿ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದ ಹೆಗ್ಗಳಿಕೆ ಕೂಡ ಈಗ ಜೋ ರೂಟ್ ಹೆಸರಿನಲ್ಲಿದೆ. ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಮತ್ತು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ತಲಾ 32 ಶತಕಗಳನ್ನು ಬಾರಿಸಿದ್ದಾರೆ. ರೂಟ್ ತಮ್ಮ ಈ ಇನಿಂಗ್ಸ್ ವೇಳೆ ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಅಲಸ್ಟೈರ್ ಕುಕ್ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ 6 ಟೆಸ್ಟ್ ಶತಕಗಳನ್ನು ಬಾರಿಸಿರುವ ಗ್ರಹಾಮ್ ಗೂಚ್ ಮತ್ತು ಮೈಕಲ್ ವಾನ್ ದಾಖಲೆ ಸರಿಗಟ್ಟಿದ್ದಾರೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡ ಇಂಗ್ಲೆಂಡ್ ಆಟಗಾರರ ಮೇಲೆ ಆರಂಭದಲ್ಲಿ ಉತ್ತಮ ದಾಳಿ ನಡೆಸಿತ್ತು. ಆದರೆ, ಜೋ ರೂಟ್ 206 ಎಸೆತಗಳಲ್ಲಿ 143 ರನ್ ಗಳಿಸಿ ಉತ್ತಮ ತಿರುಗೇಟು ನೀಡಿದರು. ಹ್ಯಾರಿ ಬ್ರೂಕ್ (33), ಜೇಮಿ ಸ್ಮಿತ್ (21), ಗಸ್ ಅಟ್ಕಿನ್ಸನ್ (52*) ಜೊತೆಗೂಟಿ ಇನಿಂಗ್ಸ್ ಕಟ್ಟುವ ಮೂಲಕ ಮೊದಲ ದಿನದ ಅಂತ್ಯಕ್ಕೆ ಇಂಗ್ಲೆಂಡ್ ತಂಡ 80 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 317 ರನ್ ಗಳಿಸಿದೆ.