ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಏಕ ದಿನ ಮಾದರಿಯ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಭಾರತ ತಂಡವನ್ನು ಅಲ್ಲಿಗೆ ಕಳುಹಿಸುತ್ತಿಲ್ಲ. ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಯುತ್ತಿದೆ. ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಭಾರತದ ಪಂದ್ಯಗಳು ನಡೆಯಲಿವೆ. ಆದಾಗ್ಯೂ ಉದ್ಘಾಟನಾ ಸಮಾರಂಭ ಪಾಕ್‌ನಲ್ಲಿಯೇ ನಡೆಯಲಿದೆ.
ಬರೋಬ್ಬರಿ ಎಂಟು ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯುತ್ತಿದ್ದು, ಈ ಬಾರಿ 8 ತಂಡಗಳು ಭಾಗವಹಿಸುತ್ತಿವೆ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಬಾರದು ಎಂದು ಭಾರತ ಸರ್ಕಾರ ಹೇಳಿದೆ. ಹೀಗಾಗಿ ನಾಯಕ ರೋಹಿತ್ ಶರ್ಮಾ ಪಾಕ್ ದೇಶಕ್ಕೆ ಹೋಗಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಫೆಬ್ರುವರಿ 16 ಅಥವಾ 17ರಂದು ರಂದು ಉದ್ಘಾಟನಾ ಸಮಾರಂಭ ಆಯೋಜಿಸುವ ನಿರೀಕ್ಷೆಯಿದೆ. ಎಲ್ಲಾ ತಂಡಗಳ ನಾಯಕರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಬೇಕಾಗುತ್ತದೆ. ಐಸಿಸಿ ಟೂರ್ನಿಗಳಲ್ಲಿ ಇದು ಸಾಮಾನ್ಯ. ಟ್ರೋಫಿಯೊಂದಿಗೆ ಫೋಟೋಶೂಟ್ ಕೂಡ ಇರುತ್ತದೆ. ಹೀಗಾಗಿ ರೋಹಿತ್ ಕೂಡಾ ಪಾಕಿಸ್ತಾನಕ್ಕೆ ತೆರಳುವ ಸುಳಿವು ಸಿಕ್ಕಿದೆ.
ಮೂಲಗಳಿಂದ ಮಾಹಿತಿ
“ಸುಮಾರು 29 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿ ನಡೆಯುತ್ತಿರುವುದರಿಂದ ಪಿಸಿಬಿ ಸಾಕಷ್ಟು ನಿರೀಕ್ಷೆಯಲ್ಲಿದೆ. ಆದರೆ, ಭಾರತ ಅಲ್ಲಿಗೆ ಹೋಗದಿರುವುದರಿಂದ ಹಿನ್ನಡೆಯಾಗಿದೆ.
ಪಾಕಿಸ್ತಾನವು 1996ರಲ್ಲಿ ಭಾರತ ಮತ್ತು ಶ್ರೀಲಂಕಾದೊಂದಿಗೆ ಜಂಟಿಯಾಗಿ ಕ್ರಿಕೆಟ್ ವಿಶ್ವಕಪ್ ಆಯೋಜಿಸಿತ್ತು. ಅದಾದ ನಂತರ ಪಾಕಿಸ್ತಾನವು ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ರಾಜಕೀಯ ಸಂಬಂಧಗಳು ಹದಗೆಟ್ಟಿರುವುದರಿಂದ, ಉಭಯ ರಾಷ್ಟ್ರಗಳು ವಿಶ್ವಕಪ್ ಮತ್ತು ಏಷ್ಯಾಕಪ್‌ನಂತಹ ಐಸಿಸಿ ಹಾಗೂ ಎಸಿಸಿ ಈವೆಂಟ್‌ಗಳಲ್ಲಿ ಮಾತ್ರ ಸ್ಪರ್ಧಿಸುತ್ತವೆ. ಉಭಯ ತಂಡಗಳು ಕೊನೆಯದಾಗಿ 2024ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಆಡಿದ್ದವು.
8 ತಂಡಗಳ ಟೂರ್ನಿ
ಟೂರ್ನಿಯಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಜೊತೆಗೆ ಆತಿಥೇಯ ಪಾಕಿಸ್ತಾನ ಭಾಗವಹಿಸಲಿವೆ. ಆತಿಥೇಯ ಪಾಕಿಸ್ತಾನ ತಂಡವು ಕರಾಚಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸುವುದರೊಂದಿಗೆ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಫೆಬ್ರುವರಿ 23ರಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.